ಕಲ್ಮಡ್ಕ ಶ್ರೀರಾಮ ಮಂದಿರದಲ್ಲಿ 7ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

0

 

ವೈದೇಹಿ ಯುವತಿ ಮಂಡಲ ಕಲ್ಮಡ್ಕ ಮತ್ತು ಶ್ರೀ ಶಾರದೋತ್ಸವ ಸಮಿತಿ ಕಲ್ಮಡ್ಕ ಇದರ ಆಶ್ರಯದಲ್ಲಿ 7ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 3ರಂದು ಕಲ್ಮಡ್ಕದ ಶ್ರೀರಾಮ ಮಂದಿರದಲ್ಲಿ ಜರಗಿತು.

ಬೆಳಿಗ್ಗೆ ಶಾರದಾ ದೇವಿಯ ಪ್ರತಿಷ್ಠೆ, ಪೂಜೆ, ಗಣಪತಿ ಹೋಮ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಂಗಳಾರತಿ, ಪ್ರಸಾದ ಭೋಜನ, ಅಪರಾಹ್ನ ಶ್ರೀ ಶಾರದಾ ದೇವಿಯ ಶೋಭಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಸೇವಾ ಸಮನ್ವಯ ತಂಡ ಕಲ್ಮಡ್ಕ ಇವರಿಂದ ನಾಸಿಕ್ ಬ್ಯಾಂಡ್ ಮತ್ತು ಶ್ರೀ ಮಹಾವಿಷ್ಣು ಸಿಂಗಾರಿಮೇಳದ‌ ಸದಸ್ಯರಿಂದ ಚೆಂಡೆವಾದನ ನಡೆಯಿತು. ಸಂಜೆ ಗಂಟೆ ಅಂಗನವಾಡಿ ಪುಟಾಣಿಗಳಿಂದ, ಕಲ್ಮಡ್ಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀರಾಮ ಮಂದಿರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗೋವಿಂದಯ್ಯ ಜೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಹಿರಿಯ ವಿದ್ವಾಂಸರಾದ ಡಾ. ಪ್ರಭಾಕರ ಶಿಶಿಲ, ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕಿ ಶ್ರೀಮತಿ ಶಶಿಕಲಾ ದೇವ, ಕುಶಾಲನಗರದ ಕವಯತ್ರಿ ಶ್ರೀಮತಿ ಲೀಲಾಕುಮಾರಿ ಎಂ.ಟಿ ತೊಡಿಕಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಲ್ಮಡ್ಕ ಗ್ರಾ.ಪಂ. ಸದಸ್ಯೆ ಶ್ರೀಮತಿ ಮೀನಾಕ್ಷಿ ಬೊಮ್ಮೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸರಸ್ವತಿ ಕಟ್ಟೆಹಿತ್ಲುರವರನ್ನು ಈ ಸಂದರ್ಭದಲ್ಲಿ ಸನ್ಮಾನ ಮತ್ತು ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ಪ್ರೇಮಲತಾ ಲೋಕೇಶ್ ರಿಗೆ ಅಭಿನಂದನೆ ನಡೆಯಿತು. ರಘು ಧರ್ಮಡ್ಕರಿಗೆ ಧನ ಸಹಾಯ ನೀಡಲಾಯಿತು. ಸಮಿತಿ ಅಧ್ಯಕ್ಷೆ ರೂಪ ಸಾಯಿನಾರಾಯಣ ಸ್ವಾಗತಿಸಿ, ಭಾಗೀರಥಿ ಕಾಚಿಲ ವಂದಿಸಿದರು. ಅಶ್ವಿನಿ ಜೋಗಿಬೆಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶ್ವಿನಿ ಜೋಗಿಬೆಟ್ಟು ಮತ್ತು ಶರಣ್ಯ ಶ್ರೀನಿವಾಸ್ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಕಲಾಗ್ರಾಮ ಕಲ್ಮಡ್ಕ ಇವರಿಂದ ಸಾಯಿನಾರಾಯಣ ನಿರ್ದೇಶನದಲ್ಲಿ ಡಾ. ಪ್ರಭಾಕರ ಶಿಶಿಲರು ಸಾಹಿತ್ಯ ನೀಡಿರುವ ನಾಟಕ ಅಮರ ಸಂಗ್ರಾಮ 1837 ನಡೆಯಿತು.