ನಗರ ಪಂಚಾಯತ್ ನಲ್ಲಿ ಸದಸ್ಯರ ಮೇಲೆ ಹಲ್ಲೆ ಯತ್ನ ಖಂಡನೀಯ : ಸುಳ್ಯ  ಕಾಂಗ್ರೆಸ್ ಪತ್ರಿಕಾಗೋಷ್ಠಿ

0

” ಸುಳ್ಯ ನಗರ ಪಂಚಾಯತ್ ಸಭೆಯಲ್ಲಿ ವಿಪಕ್ಷ ಸದಸ್ಯರು ನ್ಯಾಯಬದ್ಧವಾಗಿ ಚರ್ಚೆ ನಡೆಸುತ್ತಿದ್ದಾಗ ಬಿಜೆಪಿಯ ಕೆಲ ಸದಸ್ಯರು ಅವರ ಮೇಲೆ ಹಲ್ಲೆಯತ್ನ  ನಡೆಸಿರುವುದು ಅತ್ಯಂತ ಖಂಡನೀಯ”  ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಹೇಳಿದ್ದಾರೆ.

” ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ದಾರಿ ತಪ್ಪಿದಾಗ ವಿಪಕ್ಷದ ಸದಸ್ಯರು ಪ್ರತಿಭಟನೆ ಮಾಡುವುದು ಸಹಜ.  ಆದರೆ ಸುಳ್ಯ ನಗರ ಪಂಚಾಯತ್ ನಲ್ಲಿ ಮೊನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ವೆಂಕಪ್ಪ ಗೌಡರು ಆಡಳಿತ ಪಕ್ಷದ ತಪ್ಪನ್ನು ಟೀಕಿಸಿ ಚರ್ಚೆ ನಡೆಸುತ್ತಿದ್ದಾಗ ಬಿಜೆಪಿಯವರು ಸದಸ್ಯರು ಹಲ್ಲೆ ಯತ್ನ ನಡೆಸಿದ್ದಾರೆ. ಅದರಲ್ಲೂ  ನಾಮನಿರ್ದೇಶಿತ ಸದಸ್ಯರು ಹಲ್ಲೆ ಯತ್ನ ನಡೆಸಿರುವುದನ್ನು ನೋಡಿದರೆ ಅವರ ನೇಮಕಾತಿ ಮಾಡಿರುವುದೇ  ಅದಕ್ಕಾಗಿ ಆಗಿರಬಹುದು ಎಂಬ ಭಾವನೆ ಮೂಡುತ್ತದೆ. ಇಂಥ ಸಂದರ್ಭಗಳಲ್ಲಿ ನ. ಪಂ.  ಅಧ್ಯಕ್ಷರು ಸೂಕ್ತ ಕ್ರಮಕೈಗೊಂಡು ಸಭೆಯನ್ನು ನಿಯಂತ್ರಣಗೊಳಿಸುವ ಬೇಕಾಗಿತ್ತು.  ಆದರೆ ಅವರು   ಮೌನವಾಗಿದ್ದುದನ್ನು ಗಮನಿಸಿದರೆ ಅವರ ಕೈವಾಡ ಕೂಡ ಇಂಥ ಕೃತ್ಯದಲ್ಲಿ ಇರಬಹುದು ಎಂದು ಹೇಳಬೇಕಾಗುತ್ತದೆ”  ಎಂದು ಜಯರಾಂ ಹೇಳಿದರು.

ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ರವರು ” ಸಭೆಯಲ್ಲಿ  ಧರಣಿ ಕುಳಿತುಕೊಳ್ಳುವುದು,  ಮಲಗುವುದು,  ಚರ್ಚೆಯ ಸಂದರ್ಭ ಗಮನಸೆಳೆಯುವುದಕ್ಕಾಗಿ  ಸಭೆಗೆ ವಸ್ತುಗಳನ್ನು ತರುವುದು ಸಾಮಾನ್ಯ.  ವಿಧಾನಸಭೆಯಲ್ಲಿ ಕೂಡ ನಾವು ಅದನ್ನು  ಗಮನಿಸುತ್ತೇವೆ. ಅದೇ ರೀತಿ ಹಿಂದೆ ಟ್ಯೂಬ್ ಲೈಟನ್ನು  ವೆಂಕಪ್ಪ ಗೌಡರು ತಂದಿದ್ದರು. ಅದು ತಪ್ಪಲ್ಲ.  ಹಲ್ಲೆಗೆ ಮುಂದಾಗುವುದು ಸರಿಯಲ್ಲ ” ಎಂದು ಹೇಳಿದರು.
ನ.ಪಂ. ಮಾಜಿ ಸದಸ್ಯ ಕೆ. ಗೋಕುಲ್ ದಾಸ್ ಮಾತನಾಡಿ ” ಸುಳ್ಯ ನಗರ ಪಂಚಾಯತ್ ನ ಆಡಳಿತ ಕಸ ವಿಲೇವಾರಿ ಮಾಡುವುದಾಗಿ ಹೇಳಿ  ಭಾರೀ ಫೋಸ್ ಕೊಟ್ಟಿತ್ತು.  ಆದರೆ ಇದುವರೆಗೆ 8 ಲೋಡು ಕಸ ಮಾತ್ರ ಹೋಗಿದೆ.  8 ಲಕ್ಷ ರೂಪಾಯಿ ಪಾವತಿಯಾಗಿದೆ.  ಇದು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ ಪ್ರಕರಣವಾಗುತ್ತದೆ” ಎಂದು ಹೇಳಿದರು. ” ಕಲ್ಚೆರ್ಪೆಯಲ್ಲಿ ದಿನಕ್ಕೆ ಐನೂರು ಕೆಜಿ ಕಸ ವಿಲೇವಾರಿ ವ್ಯವಸ್ಥೆ  ಆಗುತ್ತದೆ ಎಂದು ಹೇಳಿದ್ದಾರೆ. ಆದರೆ ಅಲ್ಲಿ ವಿದ್ಯುತ್ ಕೈಕೊಟ್ಟು ವಿಲೇವಾರಿ ನಿಂತಿದೆ.  ಇಲ್ಲಿಂದ ಹೋದ ಕಸ ಅಲ್ಲೇ ಉಳೀತಾ ಇದೆ.  ಹಸಿ ಕಸ ಎಲ್ಲಿಗೆ ಹೋಗುತ್ತಿದೆ ಎಂಬ ಮಾಹಿತಿ ಕೊಡುತ್ತಿಲ್ಲ” ಎಂದು ಅವರು ಹೇಳಿದರು.

ಕೆಪಿಸಿಸಿ ರಾಜ್ಯ ವಕ್ತಾರ ಭರತ್ ಮುಂಡೋಡಿ ಮಾತನಾಡಿ ” ಆಡಳಿತದಲ್ಲಿರುವವರಿಗೆ ಇಚ್ಛಾಶಕ್ತಿ ಬೇಕು.  ಯಾರಾದರೂ ಟೀಕೆ ಮಾಡಿದರೆ ಅದನ್ನು ವಿರೋಧಿಸುವುದಲ್ಲ.  ಕೆಲಸ ಸರಿ ಮಾಡಿಕೊಡಬೇಕು.  ಅನಿರುದ್ಧ್  ಸ್ವಚ್ಛತೆ ಬಗ್ಗೆ ಹೇಳಿದರೆ,  ನೀವೇ ಲಾರಿ ಕಳಿಸಿ ಎನ್ನುವುದು,  ತ್ರಿಶೂಲ್  ರಸ್ತೆಗುಂಡಿಯ ಬಗ್ಗೆ ಹೇಳಿದರೆ ಅವರ ಮೇಲೆ ಪೊಲೀಸ್ ದೂರು ಕೊಡುವುದು – ಇದೆಲ್ಲ ದುರಹಂಕಾರವನ್ನು ತೋರಿಸುತ್ತದೆ”  ಎಂದು ಹೇಳಿದರು.

” ಸಚಿವರಾಗಿರುವ ಶಾಸಕ ಅಂಗಾರರು ನನ್ನ ಬಗ್ಗೆ  ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ  ಟೀಕೆ ಮಾಡಿದ್ದಾರೆ.  ಆದರೆ ಮಾವಿನ ಕಟ್ಟೆ – ಕೊಲ್ಲಮೊಗ್ರ  ರಸ್ತೆಗೆ ನಾನು ಜಿ.ಪ. ಸದಸ್ಯನಾಗಿರುವಾಗ ಡಾಮರೀಕರಣ
ಮಾಡಿಸಿದೆ. ನಂತರ 34 ವರ್ಷವಾದರೂ ಅಂಗಾರರಿಗೆ ಆ ರಸ್ತೆಗೆ ಪ್ಯಾಚ್ ಹಾಕುವುದಕ್ಕೆ ಕೂಡ ಆಗಿಲ್ಲ.  ಬಳ್ಪ ರಸ್ತೆ ಈಗಾಗಲೇ ಪ್ಯಾಚ್ ಬಿದ್ದಿದೆ. ಇದಕ್ಕೆ ಕಾರಣ ಭ್ರಷ್ಟಾಚಾರ ಮತ್ತು  ಬಿ.ಜೆ.ಪಿ. ಕಾರ್ಯಕರ್ತರೇ ಕಂಟ್ರಾಕ್ಟರ್ ಆಗಿರುವುದು ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಅಮೈ,ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಶಶಿಧರ್,ಮಾಜಿ ತಾಪಂ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ,  ಮಾಧ್ಯಮ ಸಂಯೋಜಕ ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು .