ನೂತನ ಜಿಲ್ಲಾಧಿಕಾರಿ ಸುಳ್ಯಕ್ಕೆ ಭೇಟಿ

0

ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ

ಒಗ್ಗಟ್ಟಾಗಿ ಕೆಲಸ ನಿರ್ವಹಿಸಿ ಜನರಿಗೆ ಸ್ಪಂದಿಸಿ : ಎಂ.ಆರ್. ರವಿಕುಮಾರ್

ಅಧಿಕಾರಿಗಳು ಒಂದು ತಂಡವಾಗಿ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಹೇಳಿದ್ದಾರೆ.


ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಭೇಟಿ ನೀಡಿದ ಅವರು ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ವೇಳೆ ಅಧಿಕಾರಿಗಳಿಗೆ ಈ ಕಿವಿ ಮಾತು ಹೇಳಿದರು.
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬಂದಾಗ ಅವರನ್ನು ಕಾಯಿಸಬೇಡಿ, ಅಲೆದಾಡಿಸಬೇಡಿ. ಯಾವ ಕೆಲಸವೂ ಆಗುವುದಿಲ್ಲ ಅಂತ ಇಲ್ಲ. ನಿಮ್ಮ ಹಂತದಲ್ಲಿ ಆಗುವುದಿಲ್ಲ ಎಂದಾದರೆ ಮೇಲಿನ ಹಂತದಲ್ಲಿ ಮಾಡಿಸಲು ಪ್ರಯತ್ನಿಸಬೇಕು. ಒಂದು ಇಲಾಖೆಯ ಅಧಿಕಾರಿಗಳು ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು. ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರನ್ನು ಸೇರಿಸಿಕೊಂಡು ಕೆಲಸ ಮಾಡಬೇಕು. ಅಧಿಕಾರಿಗಳಲ್ಲಿ ಮೇಲು ಕೀಳು ಎಂಬ ಭಾವನೆ ಇಲ್ಲ. ಎಲ್ಲರೂ ಸಾರ್ವಜನಿಕ ಸೇವೆಗೆ ಇರುವರೆಂಬ ಭಾವನೆ ಇರಬೇಕು ಎಂದು ಡಿಸಿ ಹೇಳಿದರು.


ಅಧಿಕಾರಿಗಳು ತಮ್ಮ ವೈಯಕ್ತಿಕ ಅನುಕೂಲತೆಗಿಂತ ಸಾರ್ವಜನಿಕರ ಅನುಕೂಲತೆಗೆ ಪ್ರಾಧಾನ್ಯತೆ ನೀಡಬೇಕು ಎಂದ ಅವರು, ಸುಳ್ಯದ ವಿವಿಧ ಇಲಾಖೆಗಳ ಪ್ರಗತಿ, ಸಮಸ್ಯೆ ಮತ್ತು ಕಾರ್ಯವಿಧಾನದ ಬಗ್ಗೆ ಮಾಹಿತಿ ಪಡೆದರು.
ಕಾಡಾನೆಗಳ ಹಾವಳಿ, ಜಲಜೀವನ್ ಮಿಷನ್ ಪ್ರಗತಿ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜನರಿಗೆ ಸೌಲಭ್ಯ, ಚೆಕ್ ಡ್ಯಾಂ ಗಳ ನಿರ್ಮಾಣ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಶಾಲಾ ಜಾಗಗಳ ಆರ್‌ಟಿಸಿ, ಗ್ರಾಮೀಣ ಭಾಗಗಳ ರಸ್ತೆ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದರು.
ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.