ನ.19 ರಂದು ಮಂಗಳೂರು ಬಾವುಟ ಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ‌ ಲೋಕಾರ್ಪಣೆ, ಕಾರ್ಯಕ್ರಮಕ್ಕೆ ಸುಳ್ಯದಿಂದ 10 ಸಾವಿರ ಮಂದಿ ಭಾಗವಹಿಸುವ ನಿರ್ಧಾರ : ಸಚಿವ ಅಂಗಾರ

0

ಸ್ವಾತಂತ್ರ್ಯ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ನ.19ರಂದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ನಡೆಯಲಿದೆ.

https://youtu.be/W4RGPr8aHzk


ಪ್ರತಿಮೆ ಅನಾವರಣವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ ಎಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.‌

ಸುಳ್ಯದ ತಾಲೂಕು ಪಂಚಾಯತ್ ನಲ್ಲಿರುವ ಶಾಸಕರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವರು ” ಬಾವುಟಗುಡ್ಡೆಯಲ್ಲಿ ಪ್ರತಿಮೆ ಅನಾವರಣದ ಬಳಿಕ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನಿಂದ 10 ಸಾವಿರ ಮಂದಿ ಭಾಗವಹಿಸಲು‌ ನಿರ್ಧಾರ ಮಾಡಲಾಗಿದೆ. ಹಾಗೂ ಅವರಿಗೆ ಸುಳ್ಯದಿಂದ ತೆರಳಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸುಮಾರು 200 ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗುವುದು.
ಗ್ರಾಮ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು.


ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ನೇತೃತ್ವದಲ್ಲಿ ಅಲ್ಲಲ್ಲಿ‌ ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ‌ ಅಧ್ಯಕ್ಷ‌ ಎ.ವಿ.ತೀರ್ಥರಾಮರು ಮಾತನಾಡಿ ‘ಪ್ರಥಮ ಸ್ವಾತಂತ್ರ್ಯ ಹೋರಾಟ ಸುಳ್ಯದಲ್ಲಿ ನಡೆದಿದೆ ಎಂಬುದು ನಮಗೆ ಹೆಮ್ಮೆ. ಆದುದರಿಂದ ಸ್ವಾತಂತ್ರ್ಯ ಹೋರಾಟದ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಜಿಲ್ಲಾ ಕೇಂದ್ರದಲ್ಲಿ ಲೋಕಾರ್ಪಣೆಯಾಗುವುದು ಸುಳ್ಯಕ್ಕೆ ಸಂದ‌ ಗೌರವ. ಆದುದರಿಂದ ಸುಳ್ಯದಿಂದ ಹೆಚ್ಚು ಮಂದಿ ಸಮಾರಂಭದಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಡಾ.ಎನ್.ಎ.ಜ್ಞಾನೇಶ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಗೌಡರ ಯಾನೆ ಒಕ್ಕಲಿಗರ ಯುವ ವೇದಿಕೆಯ ರಜತ್ ಅಡ್ಕಾರ್, ಸುಳ್ಯ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಕಣ್ಕಲ್ ವೀರಪ್ಪ ಗೌಡ, ಬಿ.ಜೆ.ಪಿ. ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ಮೇನಾಲ ಉಪಸ್ಥಿತರಿದ್ದರು.