ಸುಳ್ಯ ತಹಶೀಲ್ದಾರ್ ಕು.ಅನಿತಾ ಲಕ್ಷ್ಮಿ ಜಯನಗರ ವಾರ್ಡ್ ಭೇಟಿ, ಸ್ಥಳೀಯ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಗ್ರಾಮ ಲೆಕ್ಕಾಧಿಕಾರಿಯೊಂದಿಗೆ ಮಿಲಿಟರಿ ಜಾಗದ ಕುರಿತು ಮಾಹಿತಿ ಸಂಗ್ರಹ

0

ಸುಳ್ಯ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ ರವರು ಇಂದು ಸಂಜೆ ಜಯನಗರ ವಾರ್ಡಿಗೆ ಭೇಟಿ ನೀಡಿ ಕೆಲವು ಮನೆಗಳಿಗೆ ಕಾಲ್ನಡಿಗೆ ಮೂಲಕ ತೆರಳಿ ಪರಿಶೀಲನೆ ನಡೆಸಿ ಮಿಲಿಟರಿ ಜಾಗದ ಕುರಿತು ಸ್ಥಳೀಯರಿಂದ ಮತ್ತು ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ರವರಿಂದ ಮಾಹಿತಿ ಪಡೆದುಕೊಂಡರು.

ಜಯನಗರ ಪರಿಸರಕ್ಕೆ ಪರಿಶೀಲನೆಗಾಗಿ ತಹಶೀಲ್ದಾರ್ ಬರುವ ವಿಷಯ ತಿಳಿದು ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್, ಜಯನಗರ ಹಕ್ಕುಪತ್ರ ಹೋರಾಟ ಸಮಿತಿ ಸಂಚಾಲಕ ಜಿ ಜಗನ್ನಾಥ್, ಸ್ಥಳೀಯ ಮುಖಂಡರಾದ ರಾಧಾಕೃಷ್ಣ ನಾಯಕ್ ಮತ್ತು ಸ್ಥಳೀಯ ಕೆಲವರು ಜಯನಗರ ಶಾಲೆಯ ಬಳಿ ಸೇರಿದ್ದರು.


ಈ ಸಂದರ್ಭದಲ್ಲಿ ಪರಿಶೀಲನೆಗೆಂದು ಬಂದ ತಹಶೀಲ್ದಾರ್ ಸೇರಿದವರಲ್ಲಿ ಮಿಲಿಟರಿ ಜಾಗದ ಕುರಿತು, ಮತ್ತು ಈ ಪ್ರದೇಶದಲ್ಲಿ ಇರುವ ನಿವೇಶನಗಳ ಕುರಿತು ಸ್ಥಳೀಯರಲ್ಲಿ ಮತ್ತು ತಹಶೀಲ್ದಾರ್ ರೊಂದಿಗೆ ಬಂದಿದ್ದ ಸುಳ್ಯ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ರವರಲ್ಲಿ ಮಾಹಿತಿಯನ್ನು ಕೇಳಿದರು.
ನಂತರ ಕಾಲ್ನಡಿಗೆಯ ಮೂಲಕ ಜಯನಗರ ಗಜಾನನ ಭಜನಾ ಮಂದಿರದ ಪರಿಸರದಲ್ಲಿರುವ ಕೆಲವು ಮನೆಗಳಿಗೆ ಭೇಟಿ ನೀಡಿ ಮನೆಯ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.
ನಂತರ ಶ್ರೀ ಗಜಾನನ ಭಜನಾ ಮಂದಿರ, ವಿಕ್ರಮ ಯುವಕ ಮಂಡಲ, ಮೈತ್ರಿ ಮಹಿಳಾ ಮಂಡಲ, ಅಂಗನವಾಡಿ ಕೇಂದ್ರ, ಜಯನಗರ ಮುಕ್ತಿಧಾಮ,ಮಸೀದಿ ಮದರಸ ಪರಿಸರ, ಮತ್ತು ವ್ಯಾಪಾರ ಕೇಂದ್ರಗಳ ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಸುದ್ದಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಳೆದ ಹಲವಾರು ಸಮಯಗಳಿಂದ ಜಯನಗರ ಪರಿಸರಕ್ಕೆ ಭೇಟಿ ನೀಡಿ ಮಿಲಿಟರಿ ಜಾಗದ ಕುರಿತು ಇರುವ ವಿಷಯಗಳನ್ನು ಮಾಹಿತಿ ಪಡೆಯಬೇಕೆಂಬ ಉದ್ದೇಶವಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರ ನಿರ್ದೇಶನದ ಮೇರೆಗೆ ಈ ಭೇಟಿಯನ್ನು ಮಾಡಿ ಇಲ್ಲಿಯ ಮಾಹಿತಿಯನ್ನು ಸಂಗ್ರಹಿಸಿದ್ದೇನೆ.
ಈ ಬೇಟಿಯ ಮೂಲಕ ಪಡೆದಿರುವ ಮಾಹಿತಿಯನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಪರಿಸರ ನಿವಾಸಿಗಳು ಉಪಸ್ಥಿತರಿದ್ದರು.