ಗೋಪೂಜೆ ಕಾರ್ಯಕ್ರಮದಲ್ಲಿ ದಲಿತ ಬಾಲಕಿಯ ಮೇಲೆ ದೌರ್ಜನ್ಯ ನಡೆದಿಲ್ಲ
ವಿ.ಹಿಂ. ಪ., ಬಜರಂಗದಳ ಪತ್ರಿಕಾಗೋಷ್ಠಿ

0

ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಪದವುನಲ್ಲಿ ನ.೫ರಂದು ಆಯೋಜಿಸಿದ್ದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಯುವಕನೋರ್ವ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂಬ ದೂರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೈಂಗಿಕ ದೌರ್ಜನ್ಯದಂತಹ ಯಾವುದೇ ಘಟನೆಗಳು ಅಲ್ಲಿ ನಡೆದಿಲ್ಲ. ಆ ದೂರು ಸತ್ಯಕ್ಕೆ ದೂರವಾಗಿದೆ ಎಂದು ಬಜರಂಗದಳ ಜಿಲ್ಲಾ ಸಂಯೋಜಕ್ ಲತೀಶ್ ಗುಂಡ್ಯ ಹಾಗೂ ಊರಿನ ಹಿರಿಯರಾದ ಎ.ಕೆ. ನಾಯ್ಕ್ ತಿಳಿಸಿದ್ದಾರೆ.


ನ.೧೨ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಲತೀಶ್ ಗುಂಡ್ಯ, ಗೋಪೂಜೆ ಕಾರ್ಯಕ್ರಮ ಅಚ್ಚುಕ್ಕಟ್ಟಾಗಿ ಆಯೋಜನೆಗೊಂಡಿದೆ. ಸಾವಿರಕ್ಕೂ ಹೆಚ್ಚು ಹಿಂದೂ ಬಾಂಧವರು ಭಾಗವಹಿಸಿ ಯಶಸ್ವಿಯಾಗಿದೆ. ಆದರೆ ಮರುದಿನ ಗೋಪೂಜೆ ನಡೆದ ವಠಾರದಲ್ಲಿ ದಲಿತ ಬಾಲಕಿ ಮೇಲೆ ದೌರ್ಜನ್ಯ ನಡೆದಿದೆ ಎಂಬ ದೂರು ದಾಖಲಾಗಿದೆ. ಅಂತಹ ಘಟನೆಗಳು ನಡೆದಿಲ್ಲ. ನಮ್ಮ ಸಂಘಟನೆಗೆ ಕಪ್ಪುಚುಕ್ಕೆ ಬಳಿಯಲು ಕೆಲವರು ಷಡ್ಯಂತ್ರ ನಡೆಸಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಎ.ಕೆ. ನಾಯ್ಕ್ ಮಾತನಾಡಿ, ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದರು.


ಬಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ ಮಾತನಾಡಿ, ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಾಗೋಂದು ವೇಳೆ ನಡೆದಿದ್ದರೂ ಕಾರ್ಯಕ್ರಮ ಆಯೋಜಕರಾದ ನಮ್ಮ ಗಮನಕ್ಕೆ ತರುತ್ತಿದ್ದರೆ ನಾವೇ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬಹುದಿತ್ತು. ಕಾರ್ಯಕ್ರಮದ ಯಶಸ್ಸು ಸಹಿಸದೆ ಕೆಲವರು ಸಂಘಟನೆಯ ಹೆಸರು ಕೆಡಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸತಿಶ್ ಪದವು, ಸುದರ್ಶನ್ ಪಿ.ಎಸ್. ಇದ್ದರು.