ಚೊಕ್ಕಾಡಿ ಗೋಪೂಜೆ ಕಾರ್ಯಕ್ರಮದಲ್ಲಿ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ, ಬಜರಂಗದಳ ಹೇಳಿಕೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡನೆ : ಕಾನತ್ತೂರಿನಲ್ಲಿ ಪ್ರಮಾಣಕ್ಕೆ ಆಹ್ವಾನ

0

ಚೊಕ್ಕಾಡಿಯಲ್ಲಿ ನ.5 ರಂದು ನಡೆದ ಗೋಪೂಜೆ ಕಾರ್ಯಕ್ರಮದ ವಠಾರದಲ್ಲಿ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ನೊಂದ ಬಾಲಕಿ ನಮ್ಮ ಸಂಘಟನೆಗೆ ದೂರು ನೀಡಿದ್ದಾರೆ.‌ ಆದರೆ ಬಜರಂಗದಳ ಕಾರ್ಯಕರ್ತರು ಅಂತಹ ಘಟನೆಯೇ ನಡೆದಿಲ್ಲ, ಸಂಘಟನೆಯ ಹೆಸರು ಕೆಡಿಸಲು ಷಡ್ಯಂತ್ರ ಮಾಡುತ್ತಿದ್ದಾರೆಂಬ ಅವರ ಹೇಳಿಕೆಯನ್ನು ನಾವು ಖಂಡಿಸುವುದಾಗಿ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸುಂದರ ಪಾಟಾಜೆ ಹೇಳಿದ್ದಾರೆ.

ನ.14 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ನೊಂದ ಬಾಲಕಿ ಸಂಘಟನೆಗೆ ದೂರು ನೀಡಿರುವ ಕುರಿತು ವಿವರ ನೀಡಿದರು.

“ನೊಂದ ಬಾಲಕಿ ನಮಗೆ ಘಟನೆಯನ್ನು ವಿವರಿಸಿದ್ದಾಳೆ. ಅವಳಿಗೆ ನ್ಯಾಯ ಸಿಗಬೇಕೆನ್ನುವ ನಿಟ್ಟಿನಲ್ಲಿ ನಾವು ಆಕೆಯ ಜತೆ ನಿಂತಿದ್ದೇವೆ. ಘಟನೆ ನಡೆದ ಬಳಿಕ ವರ್ಷಿತ್ ಚೊಕ್ಕಾಡಿಯವರಿಗೆ ನಾವು ಕರೆ ಮಾಡಿ ನಡೆದ ವಿಷಯ ತಿಳಿಸಿದ್ದೇವೆ. ಅವರು ಕೇಸು ಮಾಡದಂತೆ ಕೇಳಿಕೊಂಡರಲ್ಲದೆ, ಬೆಳ್ಳಾರೆ ಪೋಲೀಸ್ ಠಾಣೆಗೆ ಬಂದು ಆ ನೊಂದ ಬಾಲಕಿಯ ಜತೆ ಘಟನೆಯನ್ನು ಕೇಳಿದ್ದಾರೆ ಎಂದು ವಿವರ ನೀಡಿದರು.

“ನಾವು ಸಂಘಟನೆಗೆ ವಿರೋಧ ಅಲ್ಲ. ಯಾರ ವಿರುದ್ಧವೂ ಷಡ್ಯಂತ್ರ ಮಾಡುವವರಲ್ಲ. ನೊಂದ ಬಾಲಕಿಗೆ ನ್ಯಾಯ ಸಿಗಬೇಕು. ದಲಿತರ ಮೇಲಿನ ದೌರ್ಜನ್ಯ ವನ್ನು ನಮ್ಮ ಸಂಘಟನೆ ಸಹಿಸುವುದಿಲ್ಲ. ಈಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಅಲ್ಲಿ ಸತ್ಯಾಸತ್ಯತೆ ಹೊರಬರಲಿದೆ” ಎಂದು ಹೇಳಿದ ಸುಂದರ ಪಾಟಾಜೆಯವರು “ಬಜರಂಗದಳ ಮುಖಂಡರು ದಲಿತ ಬಾಲಕಿಯ ಮೇಲೆ ಚೊಕ್ಕಾಡಿ ಗೋಪೂಜೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳುವುದಾದರೆ ಕಾನತ್ತೂರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ನಾವೂ ಬರುತ್ತೇವೆ ಎಂದು ಸವಾಲೆಸೆದರು.