ಜಟ್ಟಿಪಳ್ಳ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಆರಂಭ, ಸಂಚಾರಕ್ಕೆ ಮಾರ್ಗ ಬದಲಾವಣೆ

0

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಟ್ಟಿಪಳ್ಳ ವಸಂತ ಕಟ್ಟೆ ಬಳಿಯಿಂದ ಕೆಂಚಪ್ಪ ಭಂಡಾರಿ ಅಂಗಡಿವರೆಗಿನ ರಸ್ತೆಗೆ ಸುಳ್ಯ ಶಾಸಕರು ಹಾಗೂ ಸಚಿವರಾದ ಎಸ್. ಅಂಗಾರರು ಒದಗಿಸಿದ ರೂ. 20 ಲಕ್ಷ ಎಸ್.ಎಫ್. ಸಿ. ವಿಶೇಷ ಅನುದಾನದಲ್ಲಿ ಕಾಂಕ್ರೀಟಿಕರಣ ಕೆಲಸ ಪ್ರಗತಿಯಲ್ಲಿದ್ದು ವಾಹನ ಸಂಚಾರಕ್ಕೆ ಬದಲಿ ರಸ್ತೆ ಉಪಯೋಗಿಸುವಂತೆ ವಿನಂತಿಸಲಾಗಿದೆ.


ಜಟ್ಟಿಪಳ್ಳ ಶಾಲೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ಹೋಗಬೇಕಾದವರು ತಮ್ಮ ವಾಹನಗಳನ್ನು ಕೆಂಚಪ್ಪ ಭಂಡಾರಿಯವರ ಮನೆಯ ಎದುರಿನ ರಸ್ತೆಬದಿಯಲ್ಲಿ ನಿಲ್ಲಿಸಿ ಪಾದಚಾರಿಗಳಾಗಿ ಮುಂದುವರಿಯಬೇಕು. ಅಥವಾ ಬೊಳಿಯಮಜಲು ಬಳಿ ಸಲಾಂರವರ ಅಂಗಡಿಯ ಎದುರುಗಡೆಯ ರಸ್ತೆಯಲ್ಲಿ ಜಟ್ಟಿಪಳ್ಳದಲ್ಲಿರುವ ಚೆನ್ನಕೇಶವ ದೇವರ ಕಟ್ಟೆಯ ವರೆಗೆ ಮತ್ತು ಪೆಲ್ತಡ್ಕ ಕಡೆಗೆ ವಾಹನದಲ್ಲಿ ಹೋಗಬಹುದಾಗಿದೆ.


ಜಟ್ಟಿಪಳ್ಳ ರಸ್ತೆಯ ಕಾನತ್ತಿಲ ತಿರುವು ಬಳಿ ಕಾಂಕ್ರೀಟೀಕರಣದ ಜತೆಗೆ ಮೋರಿ ಅಳವಡಿಸುವ ಕಾರ್ಯ ಕೂಡ ನಡೆಸಲಾಗುತ್ತಿದ್ದು, ಕಾನತ್ತಿಲ ಭಾಗದ ಜನರಿಗೆ ಇನ್ನು ಕೆಲಸ ಪೂರ್ಣವಾಗಿ ಕಾಂಕ್ರೀಟ್ ಕ್ಯೂರಿಂಗ್ ಆಗುವವರೆಗೆ ಕನಿಷ್ಠ 20 ದಿನಗಳು ಈ ಮಾರ್ಗವಾಗಿ ಸಂಚಾರಕ್ಕೆ ಅಡಚಣೆ ಆಗುತ್ತದೆ.

ಕಾನತ್ತಿಲದವರಿಗೆ ಬದಲಿ ರಸ್ತೆ
ಆದುದರಿಂದ ರಸ್ತೆ ಕಾಮಗಾರಿಯ ಸಂದರ್ಭ ಕಾನತ್ತಿಲದವರಿಗೆ ತಾತ್ಕಾಲಿಕವಾಗಿ ಸಂಚರಿಸಲು ನಗರ ಪಂಚಾಯತ್ ವತಿಯಿಂದ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸ್ಥಳೀಯ ಸಂಘಟಕ ರಘುನಾಥ್ ಜಟ್ಟಿಪಳ್ಳ, ಕುಲದೀಪ್ ಪೆಲ್ತಡ್ಕ ಮತ್ತು ಲೋಹಿತ್ ಕಾನತ್ತಿಲ ನೇತೃತ್ವದಲ್ಲಿ ಹಾಗೂ ಜೆಸಿಬಿ ಆಪರೇಟರ್ ಸಹಕಾರದಿಂದ ಐ.ಬಿ. ಚಂದ್ರಶೇಖರ್ ಮನೆ ಹಿಂಬದಿ ಬಾಲಕೃಷ್ಣ ಸರಳಾಯರ ಜಾಗದ ಮೂಲಕ ಕಚ್ಚಾ ರಸ್ತೆ ನಿರ್ಮಿಸಿದ್ದು ಅದು ಜ್ಯೋತಿ ಸರ್ಕಲ್ ಬಳಿ ಇರುವ ಧನಂಜಯ ಅಡ್ಪಂಗಾಯರ ಅಂಗಡಿ ಬಳಿ ಮುಖ್ಯರಸ್ತೆಗೆ ಸೇರುತ್ತದೆ. ಬದಲಿ ರಸ್ತೆಯು ತಾತ್ಕಾಲಿಕವಾಗಿದ್ದು ದ್ವಿಚಕ್ರ ವಾಹನಗಳಿಗೆ ಸೂಕ್ತವಾಗಿದೆ ಮತ್ತು ತೀರಾ ಅಗತ್ಯವಿದ್ದರೆ ಮಾತ್ರ ರಿಕ್ಷಾ ಕಾರು ಜೀಪ್ ಇನ್ನಿತರ ಲಘು ವಾಹನ ಸಂಚಾರಕ್ಕೆ ಅವಕಾಶವಿದೆ. ಸಂಚರಿಸುವವರು ಜಾಗರೂಕರಾಗಿ ತೆರಳುವಂತೆ ಸೂಚಿಸುತ್ತಿದ್ದು ಕೆಲಸ ಪೂರ್ಣಗೊಳ್ಳುವವರೆಗೆ ಸಹಕರಿಸುವಂತೆ ವಾರ್ಡ್ ಸದಸ್ಯೆ ಹಾಗೂ ನ.ಪಂ. ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲ್ತಡ್ಕ ವಿನಂತಿಸಿಕೊಂಡಿದ್ದಾರೆ.