ಕೊರೊನಾ ರೋಗಕ್ಕೆ ಒಂದು ವರ್ಷದಲ್ಲಿ ಔಷಧ ಕಂಡು ಹಿಡಿದ ನಾವು ಅಡಿಕೆ ಎಲೆ ಹಳದಿ ರೋಗಕ್ಕೆ ಯಾಕೆ ಔಷಧ ಕಂಡು ಹಿಡಿದಿಲ್ಲ?, ಅರಂತೋಡು ಸಹಕಾರಿ ಸಪ್ತಾಹದಲ್ಲಿ ಡಾ.ಮನುಜೇಶ್ ಅಭಿಮತ

0

ಈ ಭಾಗದಲ್ಲಿ ಅಡಿಕೆಗೆ ವ್ಯಾಪಕವಾಗಿರುವ ಅಡಿಕೆ ಎಲೆ ಹಳದಿ ರೋಗಕ್ಕೆ ನಾವೇ ಔಷಧಿ ಕಂಡು ಹಿಡಿಯಬೇಕೆ ಹೊರತು ಹೊರ ದೇಶದವರು ಕಂಡು ಹಿಡಿಯಲಾರರು. ಯಾಕೆಂದರೆ ಅಲ್ಲಿ ಅಡಿಕೆ ಎಲೆ ಹಳದಿ ರೋಗ ಇಲ್ಲ.‌ ಕೊರೊನಾ ಬಂದಾಗ ಅದಕ್ಕೆ ಒಂದು ವರ್ಷದಲ್ಲಿ ಔಷಧ ಕಂಡು ಹಿಡಿದು ಯಶಸ್ವಿಯಾದ ನಾವು ಕಳೆದ 35 ವರ್ಷದಿಂದ ಇರುವ ಅಡಿಕೆ ಎಲೆ ಹಳದಿ ರೋಗಕ್ಕೆ ಯಾಕೆ ಔಷಧ ಕಂಡು ಹಿಡಿದಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಪ್ರಶ್ನೆ ಮಾಡಿಕೊಳ್ಳಬೇಕಲ್ಲದೆ, ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ದಿಟ್ಟ ಹೋರಾಟ ಮಾಡುವ ಅನಿರ್ವಾಯತೆ ಇದೆ ಎಂದು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ಡಾ. ಮುನುಜೇಶ್ ಬಿ.ಜೆ. ಹೇಳಿದ್ದಾರೆ.

ನ.17 ರಂದು ಅರಂತೋಡಿನಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಆವಿಷ್ಕಾರ ಪೋಷಣೆ, ಸ್ಟಾರ್ಟ್ ಅಪ್ ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

“ಈಗ ಎಲ್ಲರೂ ಬ್ರಾಂಡೆಂಡ್ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ. ನಮ್ಮೂರಿನಲ್ಲಿ ಸೋಪು, ಫಿನಾಯಿಲ್, ಅಗರ್ ಬತ್ತಿ ಇತ್ಯಾದಿ ಅತ್ಯುತ್ತಮ ವಸ್ತು ಗಳ ಇದ್ದರೂ ಜನರು ಕೊಂಡು ಕೊಳ್ಳುವುದಿಲ್ಲ. ಸಹಕಾರಿ ಸಂಘಗಳು ಮುಂದೆ ಬಂದು ಇಂತಹ ಜನರಿಗೆ ಮಾರುಕಟ್ಟೆ ಒದಗಿಸಿ ಸಹಕಾರ ನೀಡಬೇಕು” ಎಂದು ಅವರು ಕೇಳಿಕೊಂಡರು.