ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ಸಂಪನ್ನ, ಒಂದು ತಿಂಗಳ ಕಾಲ ಕ್ಷೇತ್ರದಲ್ಲಿ ಜರುಗಿದ ಭಜನೋತ್ಸವ

0

ಸುಳ್ಯ ಕಾಯರ್ತೋಡಿ ಶ್ರೀ ‌ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಜರುಗಿದ ಕಾರ್ತಿಕ ಪೂಜಾ ಉತ್ಸವ ನ.23ರಂದು ಸಂಪನ್ನಗೊಂಡಿದೆ.

ಒಂದು ತಿಂಗಳ ಕಾಲ ಕ್ಷೇತ್ರದಲ್ಲಿ ನಡೆದ ಕಾರ್ತಿಕ ಪೂಜೆಯ ಸಂದರ್ಭ ಪ್ರತೀ ದಿನವೂ ತಾಲೂಕಿನ ಒಂದೊಂದು ಭಜನಾ ತಂಡದವರು ಆಗಮಿಸಿ ಭಜನಾ ಸೇವೆ ನೀಡುತ್ತಿದ್ದರು. ಒಟ್ಟು ಕ್ಷೇತ್ರದಲ್ಲಿ 32 ತಂಡಗಳು ಭಜನಾ ಸೇವೆ ನೀಡಿವೆ. ಪ್ರತೀ ದಿನವೂ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ತಿಕ ಪೂಜೆಯಲ್ಲಿ ಭಾಗವಹಿಸಿದರು. ದೇವಳದಲ್ಲಿ ಜೋಡಿಸಿಟ್ಟ ಹಣತೆಯನ್ನು ಪೂಜಾ ಸಮಯದಲ್ಲಿ ಭಕ್ತರು ಬೆಳಗಿಸಲು ಅವಕಾಶ ನೀಡಲಾಗಿತ್ತು.

ಸಂಪನ್ನ : ಅ.26 ರಿಂದ ಆರಂಭಗೊಂಡ ಕಾರ್ತಿಕ ಪೂಜೆಯು ನ.23 ರಂದು ಸಂಪನ್ನಗೊಂಡಿದೆ. ಸಂಪನ್ನದ ದಿನ ಮಕ್ಕಳ ಕುಣಿತ ಭಜನೆ ಆಕರ್ಷಣೆ ಯಾಗಿತ್ತು. ಸಾವಿರಾರು ಭಕ್ತರು ಆಗಮಿಸಿ ಕಾರ್ತಿಕ ಪೂಜೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.

ಸಮಾರೋಪ ಸಭೆ : ಭಜನಾ ಸೇವೆ ಹಾಗೂ ಕುಣಿತ ಭಜನೆ ನಡೆದ ಬಳಿಕ ಕಾರ್ತಿಕ ಪೂಜೆಯ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಕೃಷ್ಣ ಕಾಮತ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಿ.ಎಸ್.ಗಿರೀಶ್, ಕೃಷ್ಣ ಬೆಟ್ಟ, ಪರಮೇಶ್ವರ ಕೆ, ಅನಂತೇಶ್ವರಿ ಕಲ್ಲುಮುಟ್ಲು, ಆನಂದ ನಡುಮುಟ್ಲು, ನಮಿತಾ ಕುಸುಮಾಧರ್ ವೇದಿಕೆಯಲ್ಲಿದ್ದರು.

ಕ್ಷೇತ್ರ ಸಂರಕ್ಷಣ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಸ್ವಾಗತಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಟಿ. ಕುಸುಮಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಸಮಿತಿ ಸಂಚಾಲಕ ನವೀನ್ ಕುದ್ಪಾಜೆ ವಂದಿಸಿದರು. ಶಿಕ್ಷಕಿ ಆಶಾ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.