ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಖಾಯಂ ಹುದ್ದೆ ಮತ್ತು ಸರಕಾರಿ ವೇತನ ನೀಡಲು ಆಗ್ರಹ, ಕೇಸರಿ ಬಳಗ ಜಾಲ್ಸೂರು ಖಂಡದಿಂದ ರಾಜ್ಯ ಆರೋಗ್ಯ ಸಚಿವರಿಗೆ ಮನವಿ

0

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರಕಾರಿ ವೇತನ ಹಾಗೂ ಖಾಯಂ ಹುದ್ದೆ ನೀಡುವಂತೆ ಹಾಗೂ ಅವರ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ, ಕೇಸರಿ ಬಳಗ ಜಾಲ್ಸೂರು ಖಂಡ ಇದರ ವತಿಯಿಂದ ರಾಜ್ಯ ಆರೋಗ್ಯ ಇಲಾಖೆಯ ಸಚಿವರಾದ ಡಾ. ಕೆ.ಸುಧಾಕರ ಅವರಿಗೆ ಮನವಿ ಪತ್ರ ನೀಡಲಾಯಿತು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗದ ವೈದ್ಯರು ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ, ಇದೀಗ ಸುಳ್ಯ ಆರೋಗ್ಯ ಕೇಂದ್ರವು ಸುಳ್ಯ ತಾಲೂಕಿನ ಹೆಮ್ಮೆಯ ಸಂಸ್ಥೆಯಾಗಿರುವುದು ಈ ಭಾಗದ ನಾಗರಿಕರಿಗೆ ಹೆಮ್ಮೆಯಾಗಿರುತ್ತದೆ. ಅದೇ ರೀತಿ ಸಿಬ್ಬಂದಿಗಳು ಸಾರ್ವಜನಿಕರ ಸೇವೆಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದರೆ ಅವರು ದುಡಿಯುವ ಶ್ರಮಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ ಎಂಬುದು ವಿಷಾದನೀಯ. ಆದುದರಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳನ್ನು ಖಾಯಂಗೊಳಿಸಿ, ಉತ್ತಮ ವೇತನ ನೀಡಬೇಕು ಹಾಗೂ ಸರ್ಕಾರದ ವತಿಯಿಂದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕು ಎಂದು ಜಾಲ್ಸೂರು ಕೇಸರಿ ಬಳಗದ ಸಂಚಾಲಕರಾದ ರವಿರಾಜ ಗಬ್ಬಲಡ್ಕ ಅವರು ಆರೋಗ್ಯ ಸಚಿವರಿಗೆ ನೀಡಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.