ಕುಕ್ಕೆ ಸುಬ್ರಹ್ಮಣ್ಯ: ಷಷ್ಠಿ ಮಹೋತ್ಸವದ ವೇಳೆ ವಾಹನ ಪಾರ್ಕಿಂಗ್‌ಗೆ ಪೊಲೀಸ್ ಇಲಾಖೆ ಮಾರ್ಗ ಸೂಚಿ, ನ.28 ಮತ್ತು 29 ರಂದು ಎಲ್ಲಿ ಪಾರ್ಕಿಂಗ್ ಮಾಡಬಹುದು ? – ಇಲ್ಲಿದೆ ಮಾಹಿತಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ದಲ್ಲಿ ಪಂಚಮಿ ಮತ್ತು ಷಷ್ಠಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಕಾರಣ ವಾಹನ ನಿಲ್ದಾಣ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನ.28 ಮತ್ತು 29 ರಂದು ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನ.28 ರಂದು ಸಂಜೆ 4 ಗಂಟೆಯಿಂದ ಎಲ್ಲಾ ವಾಹನಗಳು ನಿಗದಿ ಪಡಿಸಿದ ಪಾರ್ಕಿಂಗ್ ಸ್ಥಳದಲ್ಲೇ ನಿಲುಗಡೆಗೊಳಿಸಬೇಕು. ವಸತಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಿದವರು 4 ಗಂಟೆಯ ಒಳಗೆ ನಿಗದಿ ಪಡಿಸಿದ ವಸತಿಗೃಹಗಳಿಗೆ ತೆರಳಬೇಕು. ಅಲ್ಲದೆ ತುರ್ತು ಸಂದರ್ಭ ಹೊರತು ಪಡಿಸಿ ಸ್ಥಳೀಯರಿಗೆ ಕೂಡಾ ಈ ನಿಯಮಗಳು ಅನ್ವಯವಾಗಲಿದೆ. ಆದುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್.ಟಿ. ವಿನಂತಿಸಿದ್ದಾರೆ.

ಪಾರ್ಕಿಂಗ್ ಮಾರ್ಗಸೂಚಿ:
ಗುಂಡ್ಯ, ಉಪ್ಪಿನಂಗಡಿ, ಪುತ್ತೂರು, ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ, ಲಘು ವಾಹನಗಳಿಗೆ ಕುಮಾರಧಾರ ಹೆಲಿಪ್ಯಾಡ್ ಮತ್ತು ಪದವಿ ಪೂರ್ವ ಕಾಲೇಜು ಮೈದಾನ, ದ್ವಿಚಕ್ರ ವಾಹನಗಳಿಗೆ ಪದವಿ ಕಾಲೇಜು ಮೈದಾನ, ಬಿಲದ್ವಾರದ ಎದುರಿನ ಮೈದಾನ ಮತ್ತು ಪೊಲೀಸ್ ಕವಾಯತು ಮೈದಾನಗಳನ್ನು ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ.

ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ, ದ್ವಿಚಕ್ರವಾಹನಗಳು ಅಟೋ ನಿಲ್ದಾಣದ ಬಳಿ, ಲಘು ವಾಹನಗಳು ಸವಾರಿ ಮಂಟಪದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು. ಅಟೋ ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಎದುರಿನ ತನಕ ಕೊಂಡೊಯ್ಯಬಹುದಾಗಿದೆ. ಜಾತ್ರೋತ್ಸವಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಅವರ ಸುರಕ್ಷತಾ ದೃಷ್ಠಿಯಿಂದ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ವಾಹನ ನಿಲ್ದಾಣ ವ್ಯವಸ್ಥೆ ಆಯೋಜನೆ ಮಾಡುವ ಮೂಲಕ ಕ್ಷೇತ್ರದಲ್ಲಿ ಜಾತ್ರಾ ವೇಳೆ ವಾಹನ ದಟ್ಟಣೆ ಅಧಿಕವಾಗದಂತೆ ಸುಬ್ರಹ್ಮಣ್ಯ ಪೋಲೀಸರು ವಿಶೇಷ ಯೋಜನೆ ಮಾಡಿದ್ದಾರೆ.