ಜಾಲ್ಸೂರು ಬಳಿ ಲಾರಿ ಮತ್ತು ಇನ್ನೋವಾ ಕಾರು ನಡುವೆ ಅಪಘಾತ, ಕಾರು ಚಾಲಕ ಸೇರಿದಂತೆ ಮೂವರಿಗೆ ಗಾಯ

0

suddi news.com

ಜಾಲ್ಸೂರು
ಮುಖ್ಯರಸ್ತೆಯ ಕಾಳಮ್ಮನೆ ಬಳಿ
ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಇನ್ನೋವಾ ಕಾರೊಂದು ಪರಸ್ಪರ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರಿಗೆ ಹಾಗೂ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ನವೆಂಬರ್ 25 ರ ರಾತ್ರಿ ಸಂಭವಿಸಿದೆ.


ಮಂಗಳೂರಿನಿಂದ ಮಂಡ್ಯಕ್ಕೆ ಗ್ಯಾಸ್ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಲಾರಿಗೆ ಮಡಿಕೇರಿಯಿಂದ ಮಣಿಪಾಲಕ್ಕೆ
ಹೋಗುತ್ತಿದ್ದ ಇನ್ನೋವಾ ಕಾರು ವಿರುದ್ಧ ದಿಕ್ಕಿನಿಂದ ಬಂದ ಕಾರಣ ಲಾರಿಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿಗೆ ನಿಂತಿತೆನ್ನಲಾಗಿದೆ. ಅಪಘಾತ ನಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರಿನ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಮೂವರಿಗೂ ಕಾಲಿಗೆ ಬಲವಾದ ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನಿಗೂ ಅಲ್ಪಸ್ವಲ್ಪ ಗಾಯಗಳಾಗಿವೆ.

ಲಾರಿಯಿಂದ ಸೋರಿಕೆಯಾದ ಡೀಸೆಲ್ – ಅಗ್ನಿಶಾಮಕ ದಳ ಆಗಮನ
ಅಪಘಾತ ನಡೆದ ರಭಸಕ್ಕೆ
ಲಾರಿಯ ಟೈಯರ್ ಬ್ಲಾಸ್ಟ್ ಆಗಿದ್ದು,ಡೀಸೆಲ್ ಸೋರಿಕೆ ಆಗುತ್ತಿದ್ದಲೆನ್ನಲಾಗಿದೆ. ಗ್ಯಾಸ್ ಸಾಗಾಟದ ಲಾರಿಯಾದುದರಿಂದ ಡೀಸೆಲ್ ಸೋರಿಕೆಯಾದಲ್ಲಿ ಹೆಚ್ಚಿನ ಅಪಾಯ ತಡೆಗಟ್ಟುವ ಹಿನ್ನೆಲೆಯಲ್ಲಿ ಸುಳ್ಯ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದರು. ತಕ್ಷಣ ಧಾವಿಸಿದ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

ಮುಖ್ಯರಸ್ತೆಯಲ್ಲಿ ಸಾಲು ಸಾಲು ವಾಹನಗಳು
ಅಪಘಾತ ಸಂಭವಿಸಿದ ಹಿನ್ನೆಲೆ
ಸುಳ್ಯ – ಪುತ್ತೂರು ಮುಖ್ಯ ರಸ್ತೆ ಕೆಲ ಸಮಯ ಬ್ಲಾಕ್ ಆಗಿ ಎರಡು ಬದಿಗಳಲ್ಲಿ ಸಾಲು ಸಾಲು ವಾಹನಗಳು ನಿಂತಿದ್ದವು.
ಸುಳ್ಯ ಠಾಣಾ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎ.ಎಸ್.ಐ ತಾರನಾಥ್, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಸುಳ್ಯ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.