ಕಾಂಗ್ರೆಸ್ ಮುಖಂಡರ ಸಂಧಾನ ಸಫಲ, ರಾಜೀನಾಮೆ ಹಿಂತೆಗೆತಕ್ಕೆ ಸೋಮಶೇಖರ್ ಕೊಯಿಂಗಾಜೆ ಒಪ್ಪಿಗೆ, ಪತ್ರಿಕಾಗೋಷ್ಠಿ ರದ್ದು

0

ಸಂಪಾಜೆ ಗ್ರಾಮ ಪಂಚಾಯತ್ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರ ಮನವೊಲಿಸುವಲ್ಲಿ ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ.
ನಾಯಕರ ಒತ್ತಾಯಕ್ಕೆ ಮಣಿದಿರುವ ಸೋಮಶೇಖರ್‌ರವರು ರಾಜೀನಾಮೆ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಸ್ಥಾನದಿಂದ ಜಿ.ಕೆ. ಹಮೀದ್ ಅವರನ್ನು ಬದಲಾಯಿಸುವ ಸಂಪಾಜೆ ವಲಯ ಕಾಂಗ್ರಸ್ ನಿರ್ಧಾರವನ್ನು ಜಿ.ಕೆ. ಹಮೀದ್ ಮತ್ತಿತರ ಗ್ರಾ.ಪಂ. ಸದಸ್ಯರು ಒಪ್ಪದೆ ಜಿ.ಕೆ. ಹಮೀದ್‌ಗೆ ಬೆಂಬಲ ನೀಡಿದ್ದರಿಂದ ಸೋಮಶೇಖರ್ ಕೊಯಿಂಗಾಜೆ ಮತ್ತಿತರ ಪಕ್ಷ ಮುಖಂಡರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಜಿ.ಕೆ. ಹಮೀದ್‌ರನ್ನು ಪಕ್ಷದಿಂದ ಕೆಲ ತಿಂಗಳ ಹಿಂದೆ ಉಚ್ಛಾಟಿಸಿತ್ತು. ಇದರಿಂದ ಜಿ.ಕೆ. ಹಮೀದ್ ಗ್ರಾ.ಪಂ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದಕ್ಕೆ ಯಾವುದೇ ಅಡ್ಡಿ ಆಗಿರಲಿಲ್ಲ. ಇತ್ತೀಚೆಗೆ ಈ ವಿಚಾರವನ್ನು ಬ್ಲಾಕ್ ಕಾಂಗ್ರೆಸ್‌ನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದು ಜಿ.ಕೆ. ಹಮೀದ್ ಕರೆಯುವ ಗ್ರಾ.ಪಂ. ಸಭೆಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಜರಾಗುವುದು ಬೇಡವೆಂಬ ನಿರ್ದೇಶನವನ್ನು ನೀಡುವಂತೆ ವಲಯ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಲಾಗಿತ್ತೆನ್ನಲಾಗಿದೆ.


ಸಂಪಾಜೆ ಗ್ರಾ.ಪಂ.ನಲ್ಲಿ ೧೪ ಮಂದಿ ಸದಸ್ಯರಿದ್ದು, ಅವರಲ್ಲಿ ಒಬ್ಬರು ಬಿಜೆಪಿ ಬೆಂಬಲಿತರು. ೧೩ ಮಂದಿ ಕಾಂಗ್ರೆಸ್ ಬೆಂಬಲಿತರು. ಇವರಲ್ಲಿ ೬ ಮಂದಿ ಹಮೀದ್ ಬೆಂಬಲಿಗರಾಗಿ ಗುರುತಿಸಲ್ಪಟ್ಟಿದ್ದರೆನ್ನಲಾಗಿದೆ. 7 ಮಂದಿ ಸೋಮಶೇಖರ್ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು.
ಈ ಏಳು ಮಂದಿಯನ್ನು ಕರೆದು ಗ್ರಾ.ಪಂ. ಸಭೆಗೆ ಹಾಜರಾಗದಿರುವ ಪಕ್ಷದ ನಿರ್ಧಾರವನ್ನು ಸೋಮಶೇಖರರು ಅವರಿಗೆ ತಿಳಿಸಿದ್ದರೆನ್ನಲಾಗಿದೆ. ಆದರೆ ಅವರಲ್ಲಿ ಇಬ್ಬರು ಗ್ರಾ.ಪಂ. ಸಭೆಯಲ್ಲಿ ಭಾಗವಹಿಸಿದ್ದರಿಂದ ಕೋರಂ ಕೊರತೆ ಉಂಟಾಗದೆ ಪಂಚಾಯತ್ ಸಭೆ ನಿರ್ವಿಘ್ನವಾಗಿ ನಡೆಯಿತು.


ಸೂಚನೆ ನೀಡಿದ ಬಳಿಕವೂ ಇಬ್ಬರು ಸದಸ್ಯರು ಗ್ರಾ.ಪಂ. ಸಭೆಗೆ ಹೋದರೆಂದು ಅಸಮಾಧಾನಿತರಾದ ಸೋಮಶೇಖರ್ ಕೊಯಿಂಗಾಜೆಯವರು ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರಲ್ಲದೆ ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಶತಮಾನೋತ್ಸವದ ಬಳಿಕ ತೀರ್ಮಾನಿಸುವುದಾಗಿ ಬಾಂಬ್ ಹಾಕಿದ್ದರು.
ಈ ಘಟನೆಯ ಬಳಿಕ ಸೋಮಶೇಖರ್ ಬೆಂಬಲಕ್ಕೆ ನಿಂತಿರುವ ಇನ್ನು ಮೂವರು ಸದಸ್ಯರು ಹಾಗೂ ಆಲೆಟ್ಟಿ ಗ್ರಾ.ಪಂ. ಸದಸ್ಯರೊಬ್ಬರು ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದರು. ಇದಲ್ಲದೆ ತನ್ನ ನಿಲುವನ್ನು ವಿವರಿಸುವುದಕ್ಕಾಗಿ ಸೋಮಶೇಖರ್‌ರವರು ಮಧ್ಯಾಹ್ನ ೧೨.೩೦ಕ್ಕೆ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.
ಪರಿಸ್ಥಿತಿ ಕೈ ಮೀರುವುದನ್ನು ಕಂಡ ಕಾಂಗ್ರೆಸ್ ಮುಖಂಡರು ಇಂದು ಧನಂಜಯ ಅಡ್ಪಂಗಾಯರ ಮನೆಯಲ್ಲಿ ಕೋರ್ ಕಮಿಟಿಯ ತುರ್ತು ಸಭೆ ನಡೆಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ರಾಜ್ಯ ವಕ್ತಾರ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಪ್ರ. ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಮೊದಲಾದವರಿದ್ದ ಈ ಸಭೆಗೆ ಸೋಮಶೇಖರ್ ಕೊಯಿಂಗಾಜೆ ಮತ್ತಿತರರನ್ನು ಕರೆದು ಚರ್ಚಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆಯೂ, ಪಕ್ಷ ವಿರೋಧಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವುದಾಗಿಯೂ ಹೇಳಿದ್ದರೆನ್ನಲಾಗಿದೆ.


ಈ ಒತ್ತಾಯ ಮತ್ತು ಭರವಸೆಗೆ ಮಣಿದ ಸೋಮಶೇಖರ್ ಕೊಯಿಂಗಾಜೆ ಮತ್ತು ಇತರ ಮೂವರು ಪಂಚಾಯತ್ ಸದಸ್ಯರು ತನ್ನ ರಾಜೀನಾಮೆ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.


ಅಡ ಕತ್ತರಿಯಲ್ಲಿ ಸಿಲುಕಿದಂತಾಗಿದೆ : ಸೋಮಶೇಖರ್ ಕೊಯಿಂಗಾಜೆ
ನವು ಪಕ್ಷದ ಉನ್ನತಿಗಾಗಿ ದುಡಿದು ಈಗ ಪಕ್ಷದ ಮಾತಿಗೆ ಬೆಲೆ ಇಲ್ಲದಂತಾಗಿರುವಾಗ ನಾವು ಇದ್ದು ಪ್ರಯೋಜನವೇನು ಎಂಬ ಕಾರಣಕ್ಕಾಗಿ ರಾಜೀನಾಮೆ ನಿರ್ಧಸಿದೆ. ಆದರೆ ಪಕ್ಷದ ಮುಖಂಡರು ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಪಕ್ಷ ವಿರೋಧಿಗಳ ಮೇಲೆ ಕುಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆ ಹಿನ್ನಲೆಯಲ್ಲಿ ರಾಜೀನಾಮೆ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನನಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದು ಹೇಳಿದರು.