ಪೆರಾಜೆ: ಸಿರಿ ಕುರಲ್ ನಗರದ ವನದುರ್ಗಾ,ರಕ್ತೇಶ್ವರೀ ಹಾಗೂ ಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ- ನೂತನ ಕಟ್ಟಡದ ಮತ್ತು ಕಚೇರಿ, ಸಭಾಭವನ,ಪಾಕಶಾಲೆಯ ಉದ್ಘಾಟನೆ

0

ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಪೆರಾಜೆಯ ಸಿರಿಕುರಲ್ ನಗರದ ಶ್ರೀ ವನದುರ್ಗಾ ಮತ್ತು ರಕ್ತೇಶ್ವರೀ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ 5 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ, ಶ್ರೀ ದೈವದ ಕೋಲ ಹಾಗೂ ನೂತನವಾಗಿ ನಿರ್ಮಾಣಗೊಂಡ ಕಟ್ಟಡದ, ಆಡಳಿತ ಕಚೇರಿ ಮತ್ತು ಸಭಾಭವನ, ಪಾಕಶಾಲೆಯ ಉದ್ಘಾಟನಾ ಸಮಾರಂಭವು ಡಿ.11 ಮತ್ತು 12 ರಂದು ನಡೆಯಲಿರುವುದು.


ಡಿ.11ರಂದು ಸಾಯಂಕಾಲ
ನೂತನ ಕಟ್ಟಡ ಮತ್ತು ಸಭಾಭವನ ಹಾಗೂ ಆಡಳಿತ ಕಚೇರಿ, ಪಾಕಶಾಲೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ರವರು ವಹಿಸಲಿದ್ದಾರೆ. ನೂತನ ಕಟ್ಟಡವನ್ನು ನ್ಯಾಯವಾದಿ ಜಯಪ್ರಕಾಶ್ ರೈ ಉದ್ಘಾಟಿಸಲಿರುವರು. ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ನೂತನ ಸಭಾಭವನವನ್ನು ಉದ್ಘಾಟಿಸಲಿದ್ದಾರೆ.ಸಹಾಯಕ ಕಾರ್ಯಕಾರಿ ಅಭಿಯಂತರ ಅರುಣ್ ಕುಮಾರ್ ಕಚೇರಿ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ಕೆ.ಪಿ.ಸಿ.ಸಿ.ಸದಸ್ಯ ಹೆಚ್.ಎಂ.ನಂದಕುಮಾರ್ ನೂತನ ಪಾಕಶಾಲೆಯ ಕೊಠಡಿಉದ್ಘಾಟಿಸಲಿರುವರು. ಆ್ಯಂಕರ್ ಪ್ರೈ.ಲಿ.ಉದ್ಯೋಗಿ ನವೀನ್ ಚಂದ್ರ ಬೆಂಗಳೂರು ನಾಮಫಲಕ ಅನಾವರಣಮಾಡಲಿದ್ದಾರೆ. ಸುಳ್ಯ ಯೋಜನಾಧಿಕಾರಿ ನಾಗೇಶ್ ಪಿ ಸ್ವಾಗತ ದ್ವಾರ ಉದ್ಘಾಟಿಸಲಿರುವರು. ಬೇಬಿ ಅಪೂರ್ವ ಗೋಕುಲ್ ದಾಸ್ ಹಸಿರು ಉದ್ಯಾನವನದ ಅನಾವರಣ ಮಾಡಲಿದ್ದಾರೆ.


ಮುಖ್ಯ ಅಭ್ಯಾಗತರಾಗಿ ದೊಡ್ಡಣ್ಣ ಬರೆಮೇಲು, ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ರೈ ಉಬರಡ್ಕ, ನಾರಾಯಣ ಕೇಕಡ್ಕ, ಬೂಡು ರಾಧಾಕೃಷ್ಣ ರೈ, ಮಂಜುನಾಥ ಮೇಸ್ತ್ರಿ ಬಳ್ಳಾರಿಯವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗ ಸುಳ್ಯ ಇವರಿಂದ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮ ನಡೆಯಲಿರುವುದು. ಮರುದಿನ ಪ್ರಾತ:ಕಾಲ ಬಿ.ಎಸ್.ಎನ್.ಕಡಮಣ್ಣಾಯ ತಂತ್ರಿಯವರ ನೇತೃತ್ವದಲ್ಲಿ ಸ್ಥಳ ಶುದ್ಧಿ, ಗಣಪತಿ ಹವನ, ವನದುರ್ಗಾ ಹೋಮ, ಆಶ್ಲೇಷ ಬಲಿ, ತಂಬಿಲ ಸೇವೆ ಮುಂತಾದ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಅದೇ ದಿನ
ಬೆಳಗ್ಗೆ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರಿಂದ ಭಜನಾ ಕಾರ್ಯಕ್ರಮ ಸಂಧ್ಯಾ ಕಾಲದ ತನಕ ನಿರಂತರವಾಗಿ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಯಾಗಲಿರುವುದು. ಸಂಜೆ ಗಂಟೆ 6.00 ರಿಂದ ಶ್ರೀ ಗುಳಿಗ ದೈವದ ಕೋಲ ನಡೆದು ಪ್ರಸಾದ ವಿತರಣೆಯಾಗಿ ರಾತ್ರಿ ಸಾರ್ವಜನಿಕ ಅನ್ನ ‌ಸಂತರ್ಪಣೆಯಾಗಲಿರುವುದು ಎಂದು ನ.26 ರಂದು ಸಿರಿ ಕುರಲ್ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ರವರು ವಿವರ ತಿಳಿಸಿದರು. ದಾನಿಗಳ ಹಾಗೂ ಸ್ಥಳೀಯ ಪರಿಸರದ ಭಕ್ತಾದಿಗಳ‌ ಸಹಕಾರದಿಂದ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಐದು ವರ್ಷಗಳಿಂದ ಕೋಲ ಉತ್ಸವಗಳು ನಡೆಯುತ್ತಿದೆ. ಈ ಭಾಗದ ಎಲ್ಲಾ ವರ್ಗದ ಜನತೆ ಸೌಹಾರ್ದತೆಯಿಂದ ಸಹಕರಿಸುತ್ತಿದ್ದಾರೆ. ಇದೀಗ ಸಾನಿಧ್ಯದಲ್ಲಿ ಉತ್ಸವ ಕಾರ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ ಅವಶ್ಯಕತೆ ಇರುವ ಕಟ್ಟಡದ ಹಾಗೂ ಕಚೇರಿ ,ಪಾಕಶಾಲೆ ,ಸಭಾಭವನವು ದಾನಿಗಳ ಸಹಕಾರದಿಂದ ನಿರ್ಮಾಣವಾಗಿದೆ. ಸಿರಿ ಕುರಲ್ ಎಂಬ ಹೆಸರಿಗೆ ತಕ್ಕಂತೆ ಈ ಪ್ರದೇಶದಲ್ಲಿ ಹಸಿರು ಗಿಡ ಮರಗಳನ್ನು ಬೆಳೆಸಿ ಉದ್ಯಾನವನ್ನು ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ‌.ಅಲ್ಲದೇ ಔಷದೀಯ ಗುಣವುಳ್ಳ ಸಸ್ಯ ಗಿಡ ಗಳನ್ನು ಬೆಳೆಸಲಾಗುವುದು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಅಶೋಕ ಪೀಚೆಮನೆ ಪೆರಾಜೆ, ಉಪಾಧ್ಯಕ್ಷ ಅರವಿಂದ ಕರಕರನ, ಸದಸ್ಯ ರಾಮ ನಾಯ್ಕ್ ಕಲ್ಚೆರ್ಪೆ ಉಪಸ್ಥಿತರಿದ್ದರು.