ಸುಬ್ರಹ್ಮಣ್ಯ: ಜಾತ್ರಾ ವೇಳೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ, ಭಿಕ್ಷಾಟನೆ ಸಂಪೂರ್ಣ ನಿಷೇಧ, ಕ್ಷೇತ್ರ ನೈರ್ಮಲ್ಯತೆಗೆ ಆದ್ಯತೆ: ಪಂಚಾಯತ್ ಪ್ರಕಟಣೆ

0

ಸಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಆಗಮಿಸುವ ಭಕ್ತರ ಅನುಕೂಲತೆಗಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ. ಶ್ರೀ ಕ್ಷೇತ್ರದಲ್ಲಿ ಬೀಡಿ, ಸಿಗರೇಟು, ಗುಟ್ಕ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇದಿಸಲಾಗಿದೆ. ಅಲ್ಲದೆ ಇನ್ನಿತರ ಯಾವುದೇ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ಖಡ್ಡಾಯವಾಗಿ ನಿಷೇದಿಸಿದೆ.ವ್ಯಾಪಾರಸ್ಥರು, ಗ್ರಾಹಕರು, ಗ್ರಾಮಸ್ಥರು ಸಹಕರಿಸಬೇಕು. ಅಲ್ಲದೆ ಎಲ್ಲೆಂದರಲ್ಲಿ ಕಸ ಇತ್ಯಾದಿಗಳನ್ನು ಹಾಕದೆ ಕ್ಷೇತ್ರದ ಸ್ವಚ್ಚತೆಯನ್ನು ಕಾಪಾಡಬೇಕು. ಈ ವಿಶೇಷ ಸೂಚನೆಯನ್ನು ಸರ್ವರೂ ಪಾಲಿಸಿಕೊಂಡು ಜಾತ್ರೋತ್ಸವದ ಸೊಬಗನ್ನು ಹೆಚ್ಚಿಸಬೇಕು ಎಂದು ಗ್ರಾ.ಪಂ.ಅಧ್ಯಕ್ಷೆ ಲಲಿತಾ.ಜಿ.ಗುಂಡಡ್ಕ ಮತ್ತು ಪಿಡಿಒ ಮೋನಪ್ಪ.ಡಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ಜಾತ್ರಾ ವೇಳೆ ಸಮಗ್ರ ಸ್ವಚ್ಚತೆಗೆ ಸ್ಥಳಿಯಾಡಳಿತ ಆದ್ಯತೆ ನೀಡಿದೆ.ಸರ್ವರೂ ಸ್ವಚ್ಚತೆಯನ್ನು ಕಾಪಾಡಬೇಕು, ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯಬಾರದು. ಕಸಕಡ್ಡಿಗಳನ್ನು ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲಿ ಹಾಕುವುದನ್ನು ಸಂಪೂರ್ಣ ನಿಷೇಧಿಸಿದೆ. ಹೋಟೇಲ್, ಅಂಗಡಿ ಮುಂಗಟ್ಟುಗಳ ಕೊಳಚೆ ನೀರಿನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ತ್ಯಾಜ್ಯ ವಸ್ತುಗಳನ್ನು ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಹಾಕಿ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಲು ಹೋಟೆಲ್ ಮತ್ತು ಅಂಗಡಿ ಮಾಲಕರು ವ್ಯವಸ್ಥೆ ಮಾಡಬೇಕು.ತ್ಯಾಜ್ಯ ವಿಲೇವಾರಿ ವಾಹನವು ತ್ಯಾಜ್ಯ ವಿಲೇವಾರಿಗೆ ಸದಾ ಸನ್ನದ್ದವಾಗಿ ಇರುವ ಕಾರಣ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಕಸ ಎಸೆಯುವುದು ಕಂಡು ಬಂದರೆ ನಿರಂತರ ಗಸ್ತು ತಿರುತ್ತಿರುವ ಸ್ವಚ್ಚಗ್ರಾಹಿ ಸ್ವಯಂಸೇವಕರು ದಂಡ ವಿದಿಸಲಿದ್ದಾರೆ ಎಂದು ಪಂಚಾಯತ್ ಆಡಳಿತ ತಿಳಿಸಿದೆ.ನ.೨೨ರಿಂದ ಸುಳ್ಯದ ಪೌರ ಕಾರ್ಮಿಕರ ಮೂಲಕ ಪಂಚಾಯತ್ ಅಕ್ಷರ ವಸತಿ ಗೃಹದ ಬಳಿ,ಕಾಶಿಕಟ್ಟೆ, ಬಿಲದ್ವಾರ, ಕುಮಾರಧಾರ ಪರಿಸರದಲ್ಲಿ ಸ್ವಚ್ಚತೆ ಮಾಡುತ್ತಿದ್ದಾರೆ.ಅಲ್ಲದೆ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಕಾರ್ಯ ನಡೆದಿದೆ.

ಭಿಕ್ಷಾಟಣೆ ಸಂಪೂರ್ಣ ನಿಷೇಧ:
ಜಾತ್ರಾ ವೇಳೆ ಶ್ರೀ ದೇವಳದ ವಠಾರ, ಕಾಶಿಕಟ್ಟೆ, ರಥಬೀದಿ ಸೇರಿದಂತೆ ಕ್ಷೇತ್ರಾದ್ಯಂತ ಭಿಕ್ಷಾಟಣೆ ನಿಷೇಧಿಸಿದೆ.ಬಿಕ್ಷಾಟಣೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಅಲ್ಲದೆ ಮನೆ ಮನೆಗೆ ವಸ್ತುಗಳನ್ನು ತೆರಳಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.ಈ ರೀತಿ ಮಾರಾಟ ಮಾಡುವವರು ಪಂಚಾಯತ್‌ನಿಂದ ಪರವಾನಿಗೆ ಪಡೆದು ಮಾರಾಟಕ್ಕೆ ತೆರಳಬಹುದು.ಸಾರ್ವಜನಿಕರು ಮನೆಗೆ ಬಂದ ಮಾರಾಟಗಾರರಲ್ಲಿ ಪರವಾನಿಗೆ ಇರುವುದನ್ನು ಖಾತ್ರಿಪಡಿಸಿಕೊಂಡು ವ್ಯವಹಾರ ನಡೆಸುವುದು ಸೂಕ್ತ ಎಂದು ಆಡಳಿತ ವಿನಂತಿಸಿದೆ.

ಅಧಿಕ ದರಕ್ಕೆ ಕಡಿವಾಣ
ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿ ಮುಂಟ್ಟುಗಳನ್ನು ವಿಸ್ತರಿಸದೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಹಕರಿಸಬೇಕು.ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡಬಾರದು.ಸಾರ್ವಜನಿಕ ಪ್ರದೇಶಗಳಲ್ಲಿ, ರಸ್ತೆಯಲ್ಲಿ ಹಾಗೂ ದೇವಳಕ್ಕೆ ಸಂಬಧಿಸಿದ ವಠಾರದಲ್ಲಿ ಉಗುಳಬಾರದು.ವ್ಯಾಪಾರಸ್ಥರು ಗ್ರಾಹಕರಿಗೆ ಕಲಬೆರಕೆ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿದೆ. ಜಾತ್ರೆ ವೇಳೆ ವ್ಯಾಪಾರಸ್ಥರು ದರಪಟ್ಟಿಯನ್ನು ಅಂಗಡಿಯ ಮುಂದೆ ಹಾಕಬೇಕು.ಜಾತ್ರಾ ನೆಪದಲ್ಲಿ ಅಧಿಕ ದರಗಳನ್ನು ವಿಧಿಸುವುದನ್ನು ನಿಷೇಧಿಸಿದೆ.ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.ಹೋಟೆಲ್‌ನಲ್ಲಿ ಸದಾ ಬಿಸಿ ನೀರನ್ನು ನೀಡಬೇಕು ಮತ್ತು ತಿನಿಸುಗಳನ್ನು ಸದಾ ಮುಚ್ಚಿ ಇಡಬೇಕು ಎಂದು ತಿಳಿಸಲಾಗಿದೆ.

ಬಿಡಾಡಿ ಜಾನುವಾರುಗಳು ಗೋಶಾಲೆಗೆ
ಸಾಕು ಜಾನುವಾರುಗಳಾದ ದನ,ಕರು, ಎತ್ತು, ನಾಯಿ ಮೊದಲಾದುವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಜನನಿಬಿಡ ಪ್ರದೇಶದಲ್ಲಿ, ರಸ್ತೆಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ಬಿಡಬಾರದು.ಇದನ್ನು ಉಲ್ಲಂಘಿಸಿದರೆ ಮಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಕೆಲವೊಂದು ಎತ್ತುಗಳನ್ನು ಸಾರ್ವಜನಿಕವಾಗಿ ಬಿಟ್ಟಿದ್ದು ಅವುಗಳು ಸಾರ್ವಜನಿಕರಿಗೆ ತೊಂದರೆ ಮಾಡುವುದರ ಬಗ್ಗೆ ದೂರು ಬಂದಿದೆ ಆದುದರಿಂದ ಅವುಗಳ ಮಾಲಕರನ್ನು ಗುರುತಿಸಿ ಪೋಲೀಸ್ ಠಾಣಾಧಿಕಾರಿಗಳ ಸಹಕಾರದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.ಮಾತ್ರವಲ್ಲದೆ ರಸ್ತೆಯಲ್ಲಿ ಜಾನುವಾರುಗಳು ಕಂಡು ಬಂದಲ್ಲಿ ಅವುಗಳನ್ನು ಗೋಶಾಲೆಗೆ ರವಾನಿಸಲಾಗುವುದು ಎಂದು ತಿಳಿಸಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಸ್ವಚ್ಚಗ್ರಾಹಿ ಸ್ವಯಂಸೇವಕರು ಮತ್ತು ಗ್ರಾ.ಪಂ.ಆಡಳಿತ ಸದಾ ಸನ್ನದ್ಧವಾಗಿರಲಿದೆ ಎಂದು ಪಂಚಾಯತ್ ಆಡಳಿತ ತಿಳಿಸಿದೆ.ಅಲ್ಲದೆ ಈ ಬಗ್ಗೆ ದ್ವನಿವರ್ಧಕದ ಮೂಲಕ ನಿರಂತರವಾಗಿ ಜಾಗೃತಿ ಸಂದೇಶವನ್ನು ಬಿತ್ತರಿಸಲಾಗುತ್ತಿದೆ.