ಗಾಂಧಿನಗರ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಇಲ್ಲದೆ 6 ತಿಂಗಳು : ಅಭಿವೃದ್ಧಿಗೆ ಸಮಸ್ಯೆ, ಸಮುದಾಯದತ್ತ ಕಾರ್ಯಕ್ರಮದಲ್ಲಿ ಬಾರೀ ಚರ್ಚೆ, ಧರಣಿಗೆ ಕೆಲವು ಪೋಷಕರ ಸಲಹೆ – ಸಚಿವರಿಗೆ ಮನವಿ ಮಾಡಿಕೊಳ್ಳಲು ಕೆಲವರ ಸಲಹೆ

0

ಸುಳ್ಯ ಗಾಂಧಿನಗರ ಕೆ.ಪಿ.ಎಸ್. ಶಾಲೆಯಲ್ಲಿ ಎಸ್.ಡಿ.ಎಂ.ಸಿ.‌ ಅಸ್ತಿತ್ವದಲ್ಲಿಲ್ಲದೆ ಆಗುತ್ತಿರುವ ಸಮಸ್ಯೆಗಳ ಕುರಿತು ಬಾರೀ ಚರ್ಚೆ ಏರ್ಪಟ್ಟು ಈ ಕುರಿತು ಶಾಲೆಯ ಎದುರಲ್ಲೇ ಪೋಷಕರು ಸೇರಿ ಧರಣಿ ನಡೆಸೋಣ ಎಂದು ಕೆಲವು ಪೋಷಕರು ಆಗ್ರಹಿಸಿದರೆ, ಇನ್ನೂ ಕೆಲವು ಪೋಷಕರು ಎಸ್.ಡಿ.ಎಂ.ಸಿ. ಶೀಘ್ರ ರಚನೆಗೆ ಸಚಿವ ಎಸ್.ಅಂಗಾರರಿಗೆ ಮನವಿ ಮಾಡಿಕೊಳ್ಳಲು ಸಲಹೆ ನೀಡಿದ ಘಟನೆ ವರದಿಯಾಗಿದೆ.

ಗಾಂಧಿನಗರ ಕೆ.ಪಿ.ಎಸ್. ನಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನ.28 ರಂದು ನಡೆಯಿತು.

ಗಾಂಧಿನಗರ ಪಿಯು ಕಾಲೇಜು ಪ್ರಾಂಶುಪಾಲ ಸಮದ್, ಪ್ರೌಢಶಾಲಾ ವಿಭಾಗದ ಅರುಣ್ ಕುಮಾರ್, ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕಿ ಭವಾನಿ, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್, ಶಿಕ್ಷಣ ಸಂಯೋಜಕ ಚಂದ್ರಶೇಖರ, ನ.ಪಂ. ಸದಸ್ಯ ಶರೀಫ್ ಕಂಠಿ ವೇದಿಕೆಯಲ್ಲಿ ಇದ್ದರು.

ಎಸ್.ಡಿ.ಎಂ.ಸಿ. ಅಸ್ತಿತ್ವದಲ್ಲಿಲ್ಲದ ಕುರಿತು ಪೋಷಕರು ಪ್ರಶ್ನಿಸಿದಾಗ, ಎಸ್.ಡಿ.ಎಂ.ಸಿ. ರಚನೆಗಾಗಿ ನಾವು ಸಚಿವರಿಗೆ ಕೇಳಿಕೊಂಡಿದ್ದೇವೆ. ಅವರು ಸಮಯ ಕೊಡುವುದಾಗಿ ಹೇಳಿದ್ದಾರೆ. ಅವರ ನಿರ್ದೇಶನದಂತೆ ಮುಂದೆ ಕಮಿಟಿ ರಚನೆ ಆಗಲಿದೆ ಎಂದು ಶಿಕ್ಷಕಿ ಭವಾನಿ ಉತ್ತರಿಸಿದರು.

ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ. ಅನುದಾನ ವಾಪಸ್ ಹೋಗುತ್ತಿದೆ ಎಂಬ ಮಾಹಿತಿ ನಮಗೆ ಬಂದಿದೆ ಯಾಕೆ ಹೀಗೆ ಎಂದು ಪೋಷಕರೊಬ್ಬರು ಪ್ರಶ್ನಿಸಿದರು. ಆಗ ಮಾತನಾಡಿದ ಶರೀಫ್ ಕಂಠಿಯವರು ಸಚಿವರು ಗಾಂಧಿನಗರ ಶಾಲೆಯನ್ನು ಕಡೆಗಣಿಸುತ್ತಿದ್ದಾರೆಂದು ನಮಗನಿಸುತ್ತಿದೆ. 8 ತಿಂಗಳಿನಿಂದ ಎಸ್.ಡಿ.ಎಂ.ಸಿ. ಇಲ್ಲವೆಂದರೆ ಸರಿಯಲ್ಲ. ಇದು ವೈಫಲ್ಯವೆಂದೇ ಹೇಳಬೇಕಾಗಿದೆ. ಸಚಿವರಿದ್ದು ಸಭೆಯೇ ಆಗಿಲ್ಲ. ಎಸ್.ಡಿ.ಎಂ.ಸಿ. ಇಲ್ಲದೆ ಅಭಿವೃದ್ಧಿ ಆಗುವುದಿಲ್ಲ. ಇದರಿಂದ ಮಕ್ಕಳಿಗೂ ಸಮಸ್ಯೆ. ಯಾವುದೇ ನಿರ್ಧಾರ ಕೈಗೊಳ್ಳಲು ಆಗದ ಸ್ಥಿತಿ ಇದು ಎಂದು ಹೇಳಿದರು.
ಈ ವೇಳೆ ಕೆಲ ಪೋಷಕರು ಎಸ್.ಡಿ.ಎಂ.ಸಿ. ಆಗುವ ತನಕ ಪೋಷಕರು ಸೇರಿ ಇಲ್ಲಿ ಧರಣಿ‌ ಕುಳಿತುಕೊಳ್ಳೋಣ ಎಂದು ಹೇಳಿದರೆ, ಇನ್ನೂ ಕೆಲವು ಪೋಷಕರು ಸಚಿವರಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳೋಣ ಎಂದು ಹೇಳಿದರು.

ಶಿಕ್ಷಣ ಸಮನ್ವಯಾಧಿಕಾರಿ ಶೀತಲ್ ಮಾತನಾಡಿ ಅನುದಾನಗಳ ಕುರಿತು ವಿವರ ನೀಡಿದರಲ್ಲದೆ, ಎಸ್.ಡಿ.ಎಂ.ಸಿ. ಅಗತ್ಯತೆಯ ಕುರಿತು ವಿವರ ನೀಡಿದರು.

ಪ್ರಾಂಶುಪಾಲ ಸಮದ್ ರವರು ಕೂಡಾ ಎಸ್.ಡಿ.ಎಂ.ಸಿ.‌ಅವಶ್ಯಕತೆ ಹಾಗೂ ಸಚಿವರಿಗೆ ಮನವಿ ಮಾಡಿಕೊಂಡಿರುವ ಕುರಿತು ಸಭೆಯಲ್ಲಿ ತಿಳಿಸಿದರು.

ಬಳಿಕ ಸಚಿವರಿಗೆ ಮನವಿ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.