ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಕಳವು ಪ್ರಕರಣ : ಕಾಸರಗೋಡಿನಲ್ಲಿ ಆರೋಪಿಯ ಬಂಧನ

0

ನೀರು ಕೇಳುವ ನೆಪದಲ್ಲಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ನಾಪೋಕ್ಲು ಕಕ್ಕಬೆ ಕುಂಜಿಲ ನಿವಾಸಿ, ಪ್ರಸ್ತುತ ಕೇರಳದ ಕಾಸರಗೋಡು, ಹೊಸದುರ್ಗಾ ತಾಲೂಕು ಬದ್ರಿಯಾ ಮಂಜಿಲ್ ಪುಂಜವಿ ಕಾಂಞಗಾಡ್ ನಿವಾಸಿ ಸಲೀಂ ಪಿ.ಎ (34) ಬಂಧಿತ ಆರೋಪಿ.
ನ.28 ರಂದು ಸುಳ್ಯ ತಾಲೂಕು ಜಾಲ್ಸೂರು, ವೈಲ್ಡ್ ಕೆಫೆ ಬಳಿ ಬೈತಡ್ಕ ನಿವಾಸಿ ಕಮಲ ಅಡ್ಕಾರ್ (64) ಎಂಬವರ ಮನೆಗೆ ನೀರು ಕೇಳುವ ನೆಪದಲ್ಲಿ ಅಕ್ರಮ ಪ್ರವೇಶ ಮಾಡಿದ ಆರೋಪಿ ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವುಗೈದು ಪರಾರಿಯಾಗಿದ್ದ.
ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ 141/2022 ಕಲಂ 454,392, 506 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೆತ್ತಿಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಇಂದು ಸ್ಥಳ ಮಹಜರು ನಡೆಸಿದ್ದಾರೆ.

ಪೊಲೀಸ್ ಅಧೀಕ್ಷಕರಾದ ಋಷಿಕೇಷ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಪುತ್ತೂರು ಡಿ ವೈ ಎಸ್ ಪಿ ವೀರಯ್ಯ ಹೀರೆಮಠ್, ಸುಳ್ಯ ಸಿಪಿಐ ನವೀನ್ ಚಂದ್ರ ಜೋಗಿ ರವರ ಮಾರ್ಗದರ್ಶನದ ಮೇರೆಗೆ ಠಾಣಾ ಪಿಎಸ್ಐ ದಿಲೀಪ್ ಜಿ ಆರ್, ಪಿಎಸ್ಐ ರತ್ನಕುಮಾರ್(ತನಿಖಾ ವಿಭಾಗ) ಪ್ರೋಬೆಷನರಿ ಪಿಎಸ್ಐ ಸರಸ್ವತಿ,ಎ ಎಸ್ ಐ ಉದಯಕುಮಾರ್, ಹೆಡ್ ಕಾನ್ಸ್ ಟೇಬಲ್ ಗಳಾದ ಉದಯಗೌಡ, ದನೇಶ್, ಕಾನ್ಸ್ ಟೇಬಲ್ ಗಳಾದ ಅನುಕುಮಾರ್, ಅನಿಲ್,ಚಂದ್ರಶೇಖರ ಸಜ್ಜನ್, ಸುನೀಲ್ ರವರ ವಿಶೇಷ ತಂಡ ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಕೊಟ್ಯಾಡಿ ಎಂಬಲ್ಲಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ವೃದ್ಧ ಮಹಿಳೆಯಿಂದ ಕಿತ್ತುಕೊಂಡು ಹೋಗಿದ್ದ 10.850 ಗ್ರಾಮ್ ಚಿನ್ನದ ಸರದ ತುಂಡು(ಅಂದಾಜು ಮೌಲ್ಯ 45 ಸಾವಿರ) ಹಾಗೂ ಆರೋಪಿತನು ಘಟನಾ ಸಮಯ ಉಪಯೋಗಿಸಿದ ಮೋಟಾರ್ ಸೈಕಲ್(ಅಂದಾಜು ಮೌಲ್ಯ 50 ಸಾವಿರ) ಒಟ್ಟು 95 ಸಾವಿರ ಮೌಲ್ಯದ ಸೊತ್ತು ಸಮೇತ ಸ್ವಾದೀನಪಡಿಸಿಕೊಂಡಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.