ಬೀರಮಂಗಲ : ಪತ್ನಿಯನ್ನು ಕೊಲೆ ಮಾಡಿ ಚೀಲದಲ್ಲಿ ತುಂಬಿ ಪರಾರಿಯಾಗಿದ್ದ ಆರೋಪಿ ಇಮ್ರಾನ್ ಶೇಕ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

0

ಸುಳ್ಯ ನಗರದ ಬೀರಮಂಗಲ ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಪಶ್ಚಿಮ ಬಂಗಾಳ ಮೂಲದ ಆರೋಪಿ ಇಮ್ರಾನ್ ಶೇಕ್ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿಟ್ಟು ಸುಳ್ಯದಿಂದ ಪರಾರಿಯಾಗಿದ್ದ.


ಘಟನೆಯ ಮಾಹಿತಿ ತಿಳಿದ ಸುಳ್ಯ ಪೋಲಿಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸಿ ಫಿಂಗರ್ ಪ್ರಿಂಟ್ ತಜ್ಞರು ಮತ್ತು ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು.

ನಂತರ ಸುಳ್ಯ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸಲು ಪ್ರಾರಂಭಿಸಿದರು. ಆರಂಭದಲ್ಲಿ ಈತನ ಆಧಾರ್ ಕಾರ್ಡ್ ಅಥವಾ ಈತನ ಸರಿಯಾದ ವಿಳಾಸದ ಬಗ್ಗೆ ಸ್ಥಳೀಯರಲ್ಲಿ ಅಥವಾ ಈತ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲಕರಲ್ಲಿ ಲಭ್ಯವಿಲ್ಲದ ಕಾರಣ ಅಲ್ಪ ತೊಡಕು ಉಂಟಾಗಿತ್ತು.

ನಂತರ ಮಂಗಳೂರು ಎಸ್ಪಿಯವರ ನಿರ್ದೇಶನದ ಮೇರೆಗೆ ತನಿಖೆಗಾಗಿ ನಾಲಕ್ಕು ತಂಡಗಳನ್ನು ರಚಿಸಿ ಈತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಯಿತು. ಕೊಲೆ ಮಾಡಿದ ಬಳಿಕ ಆರೋಪಿ ಸೀದಾ ತನ್ನ ಊರಾದ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಆತನ ಮೊಬೈಲ್ ನೆಟ್ವರ್ಕನ್ನು ಆಧರಿಸಿ ಸುಳ್ಯ ಪಿಎಸ್ಐ ದಿಲೀಪ್, ಉಪ್ಪಿನಂಗಡಿ ಪಿಎಸ್ಐ ರವಿ, ಸುಳ್ಯ ಪೊಲೀಸ್ ಸಿಬ್ಬಂದಿಗಳಾದ ಅನಿಲ್ ಹಾಗೂ ಮೌಲಾನ ಇವರ ತಂಡ ವಿಮಾನದಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿ ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿ ವೆಸ್ಟ್ ಬೆಂಗಾಲದ ಬರೈಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ನಂತರ ಆತನನ್ನು ತಂದು ವಿಚಾರಣೆ ನಡೆಸಿದಾಗ ತಾನು ಕೊಲೆ ಮಾಡಿದ ದಿನವೇ ಬಸ್ಸಿನಲ್ಲಿ ರಾತ್ರಿ 10 ಗಂಟೆಗೆ ಬೆಂಗಳೂರಿಗೆ ತೆರಳಿ ಮಾರನೇ ದಿನ ಪಶ್ಚಿಮ ಬಂಗಾಳಕ್ಕೆ ತೆರಳುವ ರೈಲಿನಲ್ಲಿ ಹೋಗಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ತನ್ನ ಪತ್ನಿಯೊಂದಿಗೆ ಸಣ್ಣಪುಟ್ಟ ವಿಷಯದಲ್ಲಿ ಜಗಳವಾಗುತ್ತಿದ್ದು ಕೊಲೆ ನಡೆದ ದಿನ ಅದೇ ರೀತಿಯ ಜಗಳವಾಗಿದ್ದು ತಾನು ಹೊಡೆದಾಗ ಆಕೆ ಕಿರುಚಲು ಪ್ರಾರಂಭಿಸಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ಕುತ್ತಿಗೆಯನ್ನು ಹಿಡಿದಾಗ ಆಕೆ ಮೃತಪಟ್ಟಿದ್ದು ಆಕೆಯನ್ನು ಅಲ್ಲೇ ಬಿಟ್ಟು ಓಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಪೊಲೀಸರು ಆರೋಪಿಯನ್ನು ನವಂಬರ್ 29 ರಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಿಚಾರಣೆಗಾಗಿ ಮಾರನೆಯ ದಿನ 30ನೇ ತಾರೀಕಿಗೆ ತಮ್ಮ ಕಷ್ಟಡಿಗೆ ಪಡೆದುಕೊಂಡರು.
ವಿಚಾರಣೆ ಬಳಿಕ ಡಿಸೆಂಬರ್ ಒಂದರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಇದೇ ತಿಂಗಳ 14ನೇ ತಾರೀಖಿನವರೆಗೆ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.