ಸುಳ್ಯ ಪ್ರೆಸ್ ಕ್ಲಬ್‌ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ, ಒಳ್ಳೆಯ ಮನಸ್ಸು ಕ್ರಿಯಾತ್ಮಕ ಆಲೋಚನೆಯಿಂದ ಸಂಘಟನೆ ಬಲಿಷ್ಠ: ತಗಡೂರು ಆಶಯ

0

ಉತ್ತಮ ಮನಸ್ಸು, ಕ್ರಿಯಾತ್ಮಕ ಆಲೋಚನೆ ಮತ್ತು ಸ್ವಾರ್ಥವಿಲ್ಲದ ಸೇವೆಯಿಂದ ಬಲಿಷ್ಠ ಸಂಘಟನೆ ಕಟ್ಟಲು ಸಾಧ್ಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ನೂತನ ಸುಳ್ಯ ಪ್ರೆಸ್ ಕ್ಲಬ್‌ಗೆ ಡಿ.4 ರಂದು ಭೇಟಿ ನೀಡಿದ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರನ್ನೂ ಒಳಗೊಳ್ಳುವ ಸಂಘನೆ ಕೆಯುಡಬ್ಲ್ಯುಜೆ ಕಾನೂನಿನ ಚೌಕಟ್ಟಿನಲ್ಲಿ ಬೈಲಾದ ಪ್ರಕಾರ ಕಾರ್ಯನಿರ್ವಹಿಸುವ ಸಂಘಟನೆ. ತಾಲೂಕು ಘಟಕದಿಂದ ಹಿಡಿದು ರಾಜ್ಯ ಘಟಕದವರೆಗೆ ಎಲ್ಲಾ ಘಟಕವನ್ನು ಬಲ ಪಡಿಸಲು, ಎಲ್ಲಾ ಸದಸ್ಯರ ಏಳಿಗೆಗೆ ಪ್ರಯತ್ನ ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಸಮುದಾಯಕ್ಕೆ ಎದುರಾದ ಅನೇಕ ಸವಾಲುಗಳನ್ನು ಮರೆಯಲು ಸಾಧ್ಯವಿಲ್ಲ ಎಂದ ಅವರು ಕೋವಿಡ್‌ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಸರಕಾರದ ಆರ್ಥಿಕ ನೆರವು ದೊರಕಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಯಾವುದೇ ಸಂಘಟನೆಗಳಲ್ಲಿ ಅಧಿಕಾರ, ಹುದ್ದೆ ಶಾಶ್ವತವಲ್ಲ, ಹುದ್ದೆಗಳು ಬರುತ್ತವೆ ಹೋಗುತ್ತವೆ. ಅಧಿಕಾರ ಇರುವ ಸಂದರ್ಭದಲ್ಲಿ ಮಾಡುವ ಕೆಲಸ ಮತ್ತು ಪ್ರೀತಿ ಮಾತ್ರ ಶಾಶ್ವತ ಎಂದು ಅವರು ಹೇಳಿದರು.

ಸಂಘಟಿತ ಪ್ರಯತ್ನಕ್ಕೆ ಸುಳ್ಯದ ಪತ್ರಕರ್ತರು ಮಾದರಿ
ಪ್ರೀತಿ ಮತ್ತು ವಿಶ್ವಾಸದಿಂದ ಜಗತ್ತನ್ಮೇ ಗೆಲ್ಲಬಹುದು. ಸಂಘಟಿತ ಪ್ರಯತ್ನದಿಂದ ಅದ್ಭುತವನ್ನು ಸಾಧಿಸಬಹುದು. ಸುಂದರವಾದ ಪ್ರೆಸ್ ಕ್ಲಬ್ ನಿರ್ಮಾಣ ಮಾಡುವ ಮೂಲಕ ಸುಳ್ಯದ ಪತ್ರಕರ್ತರು ಮಾದರಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೆಯುಡಬ್ಲ್ಯುಜೆ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಿರ್ದೇಶಕ ರವಿಕುಮಾರ್ ಎನ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು. ಶಿವಾನಂದ ತಗಡೂರು ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವಂದಿಸಿದರು. ಕೋಶಾಧಿಕಾರಿ ಯಶ್ವಿತ್ ಕಾಳಂಮನೆ, ನಿರ್ದೇಶಕರಾದ ಗಂಗಾಧರ ಮಟ್ಟಿ, ಜೆ.ಕೆ.ರೈ, ದುರ್ಗಾಕುಮಾರ್ ನಾಯರ್‌ಕೆರೆ, ಗಿರೀಶ್ ಅಡ್ಪಂಗಾಯ, ಈಶ್ವರ ವಾರಣಾಸಿ, ಶಿವಪ್ರಸಾದ್ ಕೇರ್ಪಳ, ಶರೀಫ್ ಜಟ್ಟಿಪಳ್ಳ, ಸದಸ್ಯರಾದ ತೇಜೇಶ್ವರ ಕುಂದಲ್ಪಾಡಿ, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.