ಚಲನ ಚಿತ್ರ ನೋಡಲು ಬಂದ ವಿದ್ಯಾರ್ಥಿಗಳಿಂದ ಸಾರ್ವಜನಿಕವಾಗಿ ಅಸಭ್ಯ ವರ್ತನೆ ಆರೋಪ : ವಿದ್ಯಾರ್ಥಿಗೆ ಧರ್ಮದೇಟು, ಪೊಲೀಸರಿಂದ ವಿಚಾರಣೆ

0

ಚಲನ ಚಿತ್ರ ನೋಡಲು ಬಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದಾರೆಂದು ಅದೇ ಸಮುದಾಯದ ಕೆಲವರು ಬಂದು ಅವರನ್ನು ವಿಚಾರಿಸಿ ವಿದ್ಯಾರ್ಥಿಗೆ ಧರ್ಮದೇಟು ನೀಡಿದ ಘಟನೆಯೊಂದು ನಿನ್ನೆ ನಡೆದಿದೆ.
ನಿನ್ನೆ ಸುಳ್ಯ ಸಂತೋಷ್ ಚಿತ್ರಮಂದಿರದ ಆವರಣದ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮೈ ಕೈಯನ್ನು ಮುಟ್ಟಿಸಿಕೊಂಡು ಪರಸ್ಪರ ಮಾತನಾಡುತ್ತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಇದನ್ನು ನೋಡಿದ ಕೆಲವು ಸ್ಥಳೀಯ ಮುಸ್ಲಿಂ ಯುವಕರು ಅಲ್ಲಿಗೆ ತೆರಳಿ ಅವರನ್ನು ಪ್ರಶ್ನಿಸಿ, ಗದರಿಸಿ ವಿದ್ಯಾರ್ಥಿಗೆ ಹೊಡೆದರೆಂದು ತಿಳಿದು ಬಂದಿದೆ. ಈ ಘಟನೆಯನ್ನು ಕೆಲವರು ಸುಳ್ಯ ಪೊಲೀಸರ ಗಮನಕ್ಕೆ ತಂದಾಗ ಅವರು ಆಗಮಿಸಿ ಇತ್ತಂಡದವರನ್ನೂ ಠಾಣೆಗೆ ಕರೆದೊಯ್ದು ಲಘು ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿ ಬಿಟ್ಟರೆಂದು ತಿಳಿದು ಬಂದಿದೆ.
ವಿದ್ಯಾರ್ಥಿಯನ್ನು ಪ್ರಶ್ನಿಸುವ, ಹೊಡೆಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾಂತಾರ ಸಿನಿಮಾ ನೋಡಲು ಬಂದವರಿಗೆ ಹಲ್ಲೆ ಎಂದು ಕೂಡಾ ಪ್ರಚಾರವಾಗತೊಡಗಿತು.

ಘಟನೆಯ ಕುರಿತಂತೆ ವಿಚಾರಿಸಿದಾಗ, ನಮ್ಮ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಚಿತ್ರಮಂದಿರದ ಹೊರಭಾಗದಲ್ಲಿ ಕುಳಿತು ಮಾತನಾಡಿಕೊಂಡು, ಇತರರು ನೋಡಿ ಅಪಹಾಸ್ಯ ಪಡುವ ರೀತಿಯಲ್ಲಿ ವರ್ತಿಸುತ್ತಿದ್ದರು. ಇದನ್ನು ನೋಡಿದ ನಾವು ಅಲ್ಲಿಗೆ ತೆರಳಿ ನೀವು ಎಲ್ಲಿಂದ ಬಂದಿದ್ದೀರಿ? ಯಾವ ಊರಿನವರು, ಮತ್ತು ಏನು ಮಾಡುತ್ತಿದ್ದೀರಿ ಎಂದು ವಿಚಾರಿಸಿದ್ದು ಅದಕ್ಕೆ ಯುವಕ ನಾನು ಬಂಟ್ವಳ ಮೂಲದವನಾಗಿದ್ದು ಈಕೆ ಮಡಿಕೇರಿ ಮೂಲದವರು ಎಂದು ಹೇಳಿದ್ದಾರೆ. ಮತ್ತು ನಾವು ಪರಸ್ಪರ ಪ್ರೀತಿಸುತ್ತಿದ್ದು ಮಾತನಾಡಲೆಂದು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ. ನಾವು ಅವರನ್ನು ಗದರಿಸಿ,ಈಗಾಗಲೇ ಹಲವಾರು ಕಡೆಗಳಲ್ಲಿ ಬೇರೆ ಬೇರೆ ಘಟನೆಗಳಿಗೆ ಸಂಬಂಧಿಸಿದಂತೆ ಗಲಾಟೆಗಳು ನಡೆಯುತ್ತಿದ್ದು, ನೀವುಗಳು ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ವರ್ತಿಸುವುದು ಸರಿಯಲ್ಲ. ಇಲ್ಲಿಂದ ಕೂಡಲೇ ನಿಮ್ಮ ನಿಮ್ಮ ಮನೆಗೆ ತೆರಳಿ ಎಂದು ನಾವು ಗದರಿಸಿದ್ದೇವೆ. ಇದನ್ನು ಕಂಡ ಯಾರೋ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಅವರು ಅಲ್ಲಿಂದ ತೆರೆಳಿದಿದ್ದು,ನಂತರ ಸುಳ್ಯ ಪೊಲೀಸರು ವಿಚಾರಣೆಗೆಂದು ನಮ್ಮನ್ನು ಕರೆದು ಘಟನೆ ವಿವರವನ್ನು ಪಡೆದು ಕೊಂಡರು ಎಂದು ಸ್ಥಳೀಯ ಯುವಕರು ಸುದ್ದಿಗೆ ತಿಳಿಸಿದ್ದಾರೆ.