ಮಹಾಯೋಜನೆ ಸರಕಾರದಿಂದ ತಾತ್ಕಾಲಿಕ ಮಂಜೂರಾತಿ : ಆಕ್ಷೇಪಣೆಗೆ 60 ದಿನದ ಗಡುವು

0

ಸುಳ್ಯ ನಗರದ ಮಹಾಯೋಜನೆ ಸರಕಾರದಿಂದ ತಾತ್ಕಾಲಿಕ ಮಂಜೂರಾತಿಗೊಂಡಿದ್ದು ಆಕ್ಷೇಪಣೆಗೆ 60 ದಿನಗಳ ಗಡುವು ನೀಡಲಾಗಿದೆ ಎಂದು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾಹಿತಿ ನೀಡಿದರು.

ನ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಈ ಹಿಂದೆ ಚರ್ಚೆಯಾಗದೆ ಮಹಾಯೋಜನೆ ಪಟ್ಟಿ ಸರಕಾರಕ್ಕೆ ಹೋಗಿತ್ತು. ಅದರಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಅದನ್ನು ವಾಪಸ್ ತರಿಸುವ ಪ್ರಯತ್ನ ನಡೆಸಲಾಯಿತಾದರೂ ಆಗಿಲ್ಲ. ಇದೀಗ ತಾತ್ಕಾಲಿಕ ಮಂಜೂರಾತಿಗೊಂಡು ಬಂದಿದೆ.
ಅದರಲ್ಲಿನ ಸಾಧಕ ಬಾಧಕ ಚರ್ಚೆಯಾಗಿ ಆಕ್ಷೇಪಣೆಗೆ ಅವಕಾಶ ಇದೆ. ನಮ್ಮೂರಿಗೆ ಅಗತ್ಯವಿರುವ ಪ್ರಾಜೆಕ್ಟ್ ನಮಗೆ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಚರ್ಚೆ ಮಾಡೋಣ ಎಂದು ವಿನಯ ಕಂದಡ್ಕ ಹೇಳಿದರು.

ಎಂ.ವೆಂಕಪ್ಪ ಗೌಡ ಹಾಗೂ ಕೆ.ಎಸ್. ಉಮ್ಮರ್ ಈಗ ಬಂದಿರುವ ವರದಿಯ ಅಧ್ಯಯನ ಮಾಡಿ ಸದಸ್ಯರ ಸಭೆಯಲ್ಲಿ ಚರ್ಚಿಸೋಣ. ಬಳಿಕ ಸಾರ್ವಜನಿಕ ಸಭೆ ಮಾಡೋಣ ಎಂದು ಹೇಳಿದರು. ಇದಕ್ಕೆ ಸಭೆ ಒಪ್ಪಿಗೆ ನೀಡಿತು.
94 ಸಿಸಿ ಹಕ್ಕುಪತ್ರ ನೀಡಲು ಸಮಸ್ಯೆ ಇರುವಲ್ಲಿ ನ.ಪಂ. ನ ದೃಢೀಕರಣ ಕ್ಕಾಗಿ ತಾಲೂಕು ಕಚೇರಿ ಯಿಂದ ಸುತ್ತೋಲೆ ಬಂದಿದ್ದು ಈ ಕುರಿತು ಉಪ ಸಮಿತಿ ಮಾಡಿ ಸ್ಥಳ ಪರಿಶೀಲನೆ ಮಾಡೋಣ ಎಂದು ಸಭೆ ನಿರ್ಧರಿಸಿತು.