‘ಹಸಿರು ಹಸಿ ಕಸ – ನೀಲಿ ಒಣ ಕಸ’ ಹೀಗೊಂದು ಜಾಗೃತಿ, ಸುಳ್ಯ‌ ನಗರ ಪಂಚಾಯತ್ ಸಿಬ್ಬಂದಿಗಳ ಸಮವಸ್ತ್ರ ಸಾರುತ್ತಿದೆ ಹೊಸ ಸಂದೇಶ

0

ಸಾರ್ವಜನಿಕರಿಗೆ ಆಡಳಿತ ಮತ್ತು ಅಧಿಕಾರಿಗಳು ವಿವಿಧ ವಿಚಾರಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಇದೀಗ ಸುಳ್ಯ‌ ನಗರ ಪಂಚಾಯತ್ ಸಿಬ್ಬಂದಿಗಳು ವಾರಕ್ಕೊಂದು ದಿನ ಹಸಿರು ಮತ್ತು ನೀಲಿ ಬಣ್ಣದ ಸಮವಸ್ತ್ರ ಧರಿಸುವ ಮೂಲಕ ಹೊಸದೊಂದು ಸಂದೇಶ ರವಾನಿಸುವ ಮೂಲಕ ಜಾಗೃತಿ ಕೈಗೊಂಡಿರುವುದು ಸುದ್ದಿಯಾಗುತ್ತಿದೆ. ಹಸಿರು ಬಣ್ಣ ಹಸಿ ಕಸದ ಹಾಗೂ ನೀಲಿ ಬಣ್ಣ ಒಣ ಕಸದ ಸಂಕೇತ.

ಸುಳ್ಯದಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿತ್ತು.‌ಬಳಿಕ ಅದಕ್ಕೊಂದು ವ್ಯವಸ್ಥೆ ಕಂಡುಕೊಳ್ಳಲಾಯಿತಾದರೂ ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಒಟ್ಟಾಗಿ ಕೊಡುತ್ತಿದ್ದರು. ಇದನ್ನು ಬೇರ್ಪಡಿಸುವ ಕಾರ್ಯ ಸವಾಲಾಗಿತ್ತು. ಅದಕ್ಕಾಗಿ ನ.ಪಂ. ಆಡಳಿತ ಮತ್ತು ಅಧಿಕಾರಿಗಳು, ಸಿಬ್ಬಂದಿಗಳು ದೊಡ್ಡ ಮಟ್ಟದಲ್ಲಿ ಜಾಗೃತಿ ಕೈಗೊಂಡರು. ಅದರಂತೆ ಈಗ ನಗರದಲ್ಲಿ ಹಸಿ ಕಸ – ಒಣ ಕಸ ವಿಂಗಡಿಸಿ ನೀಡುವ ಸಂಪ್ರದಾಯ ಇದೆ.

ಇದಕ್ಕೆ ಪೂರಕವೆಂಬಂತೆ ಜಾಗೃತಿ ನಿರಂತರ ವಾಗಿಸಲು ನ.ಪಂ. ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಹಸಿರು ಹಾಗೂ ನೀಲಿ ಬಣ್ಣದ ಸಮವಸ್ತ್ರವನ್ನು ಮಾಡಿಕೊಂಡಿದ್ದು ಪ್ರತಿ ಗುರುವಾರ ಇದನ್ನು ಧರಿಸುವುದರೊಂದಿಗೆ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗುರುವಾರ ಸ್ವಚ್ಚತಾ ಅಭಿಯಾನ :ನಗರ ವ್ಯಾಪ್ತಿಯಲ್ಲಿ ಪ್ರತೀ ಗುರುವಾರ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರ ಮುಂದಾಳತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಚತಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ನ.ಪಂ. ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈ ಜೋಡಿಸುತ್ತಿದ್ದಾರೆ.

“ಹಸಿರು ಬಣ್ಣ ಹಸಿಯಾಗಿರುವುದರ ಸಂಕೇತವಾದರೆ, ನೀಲಿ ಒಣ ಕಸದ ಸಂಕೇತ. ಆದ್ದರಿಂದ ಇಲ್ಲಿ ಸಿಬ್ಬಂದಿಗಳು ಹಸಿರು – ನೀಲಿ ಬಣ್ಣದ ಸಮವಸ್ತ್ರ ಧರಿಸುತ್ತೇವೆ. ಇದೊಂದು ರೀತಿಯ ಜಾಗೃತಿ ಕಾರ್ಯವಾದರೆ, ಮತ್ತೊಂದೆಡೆ ಸಮವಸ್ತ್ರ ದಿಂದ ಶಿಸ್ತಿನಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿದೆ”.

ಸುಧಾಕರ್ ಮುಖ್ಯಾಧಿಕಾರಿಗಳು ನ.ಪಂ. ಸುಳ್ಯ