ಡಿ.16 ರಿಂದ 18 ರವರೆಗೆ ಸುಳ್ಯದಲ್ಲಿ ಬೃಹತ್ ಕೃಷಿ ಮೇಳ, ಕೃಷಿ ಮೇಳದಲ್ಲಿ ಏನೇನಿದೆ ? ಕೃಷಿ ಮೇಳದ ವಿಶೇಷವೇನು ?ಸುದ್ದಿಗೋಷ್ಠಿಯಲ್ಲಿ ಸಂಘಟಕರ
ಮಾಹಿತಿ

0

ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಡಿ.16, 17 ಹಾಗೂ 18 ರಂದು ಮೂರು ದಿನಗಳ ಕಾಲ ಬೃಹತ್ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ.

ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರುಗಳು, ಶಾಸಕರುಗಳು, ಸಂಸದರು, ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಭಾಗವಹಿಸಲಿದ್ದು, 170 ಕ್ಕೂ ಅಧಿಕ ಕೃಷಿ ಸಂಬಂಧಿ ಮಳಿಗೆಗಳು, ಪಾರಂಪರಿಕ ಗ್ರಾಮ ವೈಶಿಷ್ಟ್ಯ, ತಾರಾಲಯ ಹೀಗೆ ಹಲವು ವಿಶೇಷತೆಗಳೊಂದಿಗೆ ಆಯೋಜನೆ ಮಾಡಲಾಗಿದೆ ಎಂದು ಕೃಷಿ ಮೇಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಮಂಗಳೂರು ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಜಿ.ಆರ್. ಪ್ರಸಾದ್ ಹೇಳಿದರು.

ಡಿ.9 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಕಾರ್ಯಕ್ರಮದ ಆಯೋಜನೆ ಕುರಿತು ಅವರು ವಿವರ ನೀಡಿದರು. “ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪೆನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಸಹಕಾರಿ ಯೂನಿಯನ್, ಸುಳ್ಯ, ಸುದ್ದಿ ಸುದ್ದಿ ಬಿಡುಗಡೆ-ಮಾಧ್ಯಮ ಸಹಯೋಗ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ, ನಗರ ಪಂಚಾಯತ್ ಮತ್ತು ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಬೃಹತ್ ಕೃಷಿ ಮೇಳ ಸುಳ್ಯ ನಡೆಯುವುದು.

ಡಿ.16 ರಂದು ಬೆಳಗ್ಗೆ ಕೃಷಿ ಮೇಳದ ಪ್ರಾರಂಭೋತ್ಸವ ನಡೆಯಲಿದ್ದು ಸುಳ್ಯ ತಹಶೀಲ್ದಾರ್ ಕು. ಅನಿತಾಲಕ್ಷ್ಮಿ ಧ್ವಜಾರೋಹಣಗೈಯ್ಯುವರು. ಮಾಣಿಲ ಶ್ರೀ ಕ್ಷೇತ್ರದ ಮೋಹನದಾಸ ಸ್ವಾಮೀಜಿ ಯವರು ಗೋಪೂಜೆ ನಡೆಸಿ, ಬಳಿಕ ಆಶೀರ್ವಚನ ನೀಡಲಿದ್ದಾರೆ. ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ವಿಚಾರ ಸಂಕಿರಣ ಪ್ರಾರಂಭೋತ್ಸವ ಬಳಿಕ ತೋಟಗಾರಿಕೆ ಕೃಷಿ, ರೋಗಗಳು, ಪರಿಹಾರ, ಬೆಳೆ ವಿಮೆ ಬಗ್ಗೆ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಾಗಾರ ನಡೆಯಲಿದ್ದು ಸಂಪನ್ಮೂಲ ವ್ಯಕಿಯಾಗಿ ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಎಚ್.ಆರ್. ನಾಯಕ್ ಭಾಗವಹಿಸುತ್ತಾರೆ. ಇದೇ ಸಂದರ್ಭ ಕೃಷಿಕರೊಂದಿಗೆ ಸಂವಾದ ನಡೆಯುವುದು. ಮಧ್ಯಾಹ್ನ ಹೈನುಗಾರಿಕೆ ಮತ್ತು ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಿತಿನ್ ಪ್ರಭು ಭಾಗವಹಿಸುವರು.

ಸಂಜೆ ಕೃಷಿ ಮೇಳದ ಉದ್ಘಾಟನೆ ನಡೆಯಲಿದ್ದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಎಸ್. ಅಂಗಾರ ಅಧ್ಯಕ್ಷತೆ ವಹಿಸುವರು. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಮತ್ತು ಆಶೀರ್ವಚನ ನೀಡಲಿದ್ದಾರೆ.
ಕೃಷಿ ಮೇಳವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ನೆರವೇರಿಸುವರು.
ಪ್ರಾಚೀನ ವಸ್ತು ಸಂಗ್ರಹಾಲಯವನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ವಿ. ಸುನಿಲ್ ಕುಮಾರ್‌ ನೆರವೇರಿಸುವರು. ತಾರಾಲಯವನ್ನು ಸಂಸದರಾದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಪಾರಂಪರಿಕ ಗ್ರಾಮವನ್ನು ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸುವರು.ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟರಾಜ ನೃತ್ಯನಿಕೇತನ ಕಲ್ಲುಗುಂಡಿ ಇವರಿಂದ ಜಾನಪದ ನೃತ್ಯ ವೈಭವ, ಬಳಿಕ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಶಿವಧ್ವಜ್ ಶೆಟ್ಟಿ ಇವರ ಈ – ಮಣ್ಣು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರದ ಪ್ರದರ್ಶನ ನಡೆಯುವುದು.
ಡಿ. 17 ರಂದು ಬೆಳಗ್ಗೆ ಆಧುನಿಕ ಕೃಷಿ ಮತ್ತು ಪರ್ಯಾಯ ಸಮಗ್ರ ಕೃಷಿ ಬಗ್ಗೆ ವಿಚಾರ ಸಂಕಿರಣ ಸಂಪನ್ಮೂಲ ವ್ಯಕ್ತಿಯಾಗಿ ಕೃಷಿಕ ಪ್ರಭಾಕರ ಮಯ್ಯ, ಸುರ್ಯ ಭಾಗವಹಿಸುವರು. ಜತೆಗೆ ಸಂವಾದ ನಡೆಯುವುದು. ಬಳಿಕ ಜೇನು ಸಾಕಾಣಿಕೆ ಬಗ್ಗೆ ಸಂವಾದ ನಡೆಯಲಿದೆ. ಅಪರಾಹ್ನ ಒಳನಾಡು ಮೀನುಗಾರಿಕೆ ಬಗ್ಗೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ರಮೇಶ್ ಎಂ.ಆರ್. ಭಾಗವಹಿಸುವರು.
ಸಂಜೆ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ನಡೆಯಲಿದ್ದು ಅಧ್ಯಕ್ಷತೆಯನ್ನು ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ವಹಿಸಲಿದ್ದಾರೆ. ಅಶೀರ್ವಚನವನ್ನು ಮಂಗಳೂರು ಇಸ್ಕಾನ್ ಸಂಸ್ಥೆಯ ಅಧ್ಯಕ್ಷರಾದ ಗುಣಕರ ರಾಮದಾಸ್ ನೀಡುವರು. ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಸಚಿವರಾದ ಮುನಿರತ್ನ ಸಹಿತ ಹಲವು ಗಣ್ಯರು ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಟೀಂ ಟ್ಯಾಲೆಂಟ್ ಹಂಟರ್ಸ್ ಇವರಿಂದ ಕೊಳಲುವಾದನ, ಸಭಾ ಕಾರ್ಯಕ್ರಮದ ಬಳಿಕ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರಿಂದ ಶ್ವೇತ ಅರೆಹೊಳೆ ನಿರ್ದೇಶನದ ನೃತ್ಯ ವೈಭವ ನಡೆಯುವುದು.

ಡಿ.18 ರಂದು ಸಾವಯವ ಕೃಷಿ ಮತ್ತು ತರಕಾರಿ ಬೆಳೆಗಳ ಮಾಹಿತಿ ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಹರಿಕೃಷ್ಣ ಕಾಮತ್ ಪ್ರಗತಿಪರ ಕೃಷಿಕರು, ಪದ್ಮಾ ಕೊಲ್ದಾರ್ ನೈಸರ್ಗಿಕ ಕೃಷಿಕರು ಭಾಗವಹಿಸುವರು. ಜತೆಗೆ ಸಂವಾದ, ಬಳಿಕ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಜನ ಸಂವಾದ, ಅಪರಾಹ್ನಉತ್ಪನ್ನ ಮೌಲ್ಯವರ್ಧನ ಬಗ್ಗೆ ಮತ್ತು ಕಿರು ಆಹಾರ ಸಂಸ್ಕರಣೆ ಹಾಗೂ ಆತ್ಮನಿರ್ಭರ ಯೋಜನೆಗಳಿಗೆ ಸಂಬಂಧಪಟ್ಟಂತೆ ಸರಕಾರದ ಸವಲತ್ತುಗಳು ಸಂಪನ್ಮೂಲ ವ್ಯಕ್ತಿಯಾಗಿ ಡಾ. ಫಝಲ್ ಭಾಗವಹಿಸುವರು.

ಸಂಜೆ ಕೃಷಿ ಮೇಳದ ಸಮಾರೋಪ ಸಮಾರಂಭ ನಡೆಯುವುದು. ಅಧ್ಯಕ್ಷತೆ ಯನ್ನು ಮಂಗಳೂರು ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾದ ಜಿ.ಆರ್. ಪ್ರಸಾದ್ ವಹಿಸಲಿದ್ದಾರೆ.
ಆಶೀರ್ವಚನವನ್ನು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ನೀಡುವರು. ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ರಂಗಮಯೂರಿ ಕಲಾಶಾಲೆ ಸುಳ್ಯ ಇವರಿಂದ ಲೋಕೇಶ್ ಊರುಬೈಲು ನಿರ್ದೇಶನದಲ್ಲಿ ವಿಶ್ವಮಾನವ ರಂಗರೂಪಕ. ಸಭಾ ಕಾರ್ಯಕ್ರಮದ ಬಳಿಕ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಕಲಾವಿದರು ಕುಳಾಯಿ ಇವರಿಂದ ತುಳುನಾಡ ವೈಭವ ನಡೆಯುವುದು.

ಯುವ ಜನಾಂಗವನ್ನು ಆಧುನಿಕ ಹಾಗೂ ಸಾವಯವ ಕೃಷಿಯೆಡೆಗೆ ಆಕರ್ಷಿಸುವುದು ಕೃಷಿ ಮೇಳದ ಉದ್ದೇಶವಾಗಿದ್ದು, ಸಮಗ್ರ ಕೃಷಿ ಪದ್ಧತಿಯನ್ನು ಹೇಗೆ ಯಶಸ್ವಿ ಮಾಡಬಹುದೆಂಬ ಮಾಹಿತಿಯೂ ನೀಡಲಾಗುತ್ತದೆ. ಈ ಭಾಗದಲ್ಲಿ ಇರುವ ಅಡಿಕೆ ಹಳದಿ ಎಲೆ ರೋಗಕ್ಕೆ ಪರಿಹಾರ ಸಿಕ್ಕಿಲ್ಲ. ಆ ಕುರಿತು ವಿಚಾರ ಸಂಕಿರಣದಲ್ಲಿ ಸಮಗ್ರ ಚರ್ಚೆ ನಡೆದು, ತೋಟಗಾರಿಕಾ ಸಚಿವರ ಜತೆಗೂ ಚರ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಕೃಷಿಕ ಮೂಲ ಆದಾಯಕ್ಕೆ ಪೆಟ್ಟು ಬೀಳದ ರೀತಿಯಲ್ಲಿ ಕೃಷಿಯನ್ನು ಹೇಗೆ ಮಾಡಬಹುದೆಂದು ಚರ್ಚೆ ನಡೆಯುತ್ತದೆ. ಒಟ್ಟಾರೆಯಾಗಿ ಕೃಷಿಕನಿಗೆ ಪ್ರಯೋಜನ ವಾಗುವ ರೀತಿಯ ಕೃಷಿ ಮೇಳ ಇದಾಗಲಿದೆ ಎಂದವರು ತಿಳಿಸಿದರು.

ಪಾರಂಪರಿಕ ಗ್ರಾಮ : ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಭಾ ಕಾರ್ಯಕ್ರಮ, ವಿಚಾರ ಸಂಕಿರಣ ನಡೆದರೆ ಪಕ್ಕದ ಮೈದಾನದಲ್ಲಿ 170 ಕ್ಕೂ ಅಧಿಕ ಕೃಷಿ ಸಂಬಂಧಿ ಮಳಿಗೆ ಇರುತ್ತದೆ. ಧರ್ಮಸ್ಥಳ ಯೋಜನಾಧಿಕಾರಿ ಕಚೇರಿಯ ಮುಂಭಾಗದ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಇರಲಿದೆ. ದೇವಸ್ಥಾನದ ಪಕ್ಕದ ಕಾನೂನು ಕಾಲೇಜಿನ ಕೆಳಗಿನ ಪ್ರಭು ಮೈದಾನದಲ್ಲಿ ತಾರಾಲಯ ಹಾಗೂ ಪ್ರಾಚ್ಯ ವಸ್ತು ಸಂಗ್ರಹಲಾಯಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲೇ ಮೇಲ್ಬಾಗದ ಜಾಗದಲ್ಲಿ ಪಾರಂಪರಿಕ ಗ್ರಾಮವನ್ನು ರಚನೆ ಮಾಡಲಾಗುವುದು. ಪಾರಂಪರಿಕ ಗ್ರಾಮದಲ್ಲಿ 10 ರಿಂದ 12 ರಷ್ಟು ಕುಟೀರಗಳನ್ನು ನಿರ್ಮಿಸಿ ಹಿಂದಿನ ಜೀವನ ಪದ್ಧತಿ ಹಾಗೂ ಕುಲ ಕಸುಬಿನ ಕುರಿತು ವಿವರಗಳಿದ್ದು, ಅದನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಡೆಯುವುದು.

ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಹಿಂದಿನ ಪಾತ್ರೆ ಪಗಡೆಗಳು, ನಾಣ್ಯ, ನೋಟುಗಳ ಹಳೆಯ ಕಾಲದ ವಸ್ತುಗಳು ಅಲ್ಲಿ ಇರುತ್ತದೆ. ತಾರಾಲಯದಲ್ಲಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ವೈಶಿಷ್ಟ್ಯತೆಗಳು ಇರುತ್ತದೆ. ತಾರಾಲಯಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಬರುವವರಿದ್ದು ಅವರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಜಿ.ಆರ್. ಪ್ರಸಾದ್ ಹೇಳಿದರು.

ಇವಿಷ್ಟೆ ಅಲ್ಲದೆ ಕುಕ್ಕುಟೋದ್ಯಮ ಮೇಳಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಹಳ್ಳಿಯ ಸೊಬಗು
ಕಂಬಳ ಕೋಣದ ಮೆರುಗು

ಡಿ.16 ರಂದು ಸಂಜೆ ಕೃಷಿ ಮೇಳದ ಉದ್ಘಾಟನೆ ನಡೆಯಲಿದ್ದು ಸಭಾ ಕಾರ್ಯಕ್ರಮಕ್ಕೆ ಮೊದಲು ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಹಳ್ಳಿಯ ಸೊಬಗಿನ ಮೆರವಣಿಗೆ ನಡೆಯಲಿದೆ. ಇದರಲ್ಲಿ ಕಂಬಳ ಕೋಣಗಳು ಸೇರಿ ಹತ್ತು ಹಲವು ವೈಶಿಷ್ಯತೆಯನ್ನು ಜೋಡಿಸಲು ಸಿದ್ಧತೆಗಳು ನಡೆದಿದೆ.

ಪಾರ್ಕಿಂಗ್ ವ್ಯವಸ್ಥೆ ಎಲ್ಲಿ ?
ಕೃಷಿ ಮೇಳಕ್ಕೆ ಆಗಮಿಸುವವರಿಗೆ ಎ.ಪಿ.ಎಂ.ಸಿ. ಒಳಗೆ ಹಾಗೂ ಸುಳ್ಯ ಆಯುರ್ವೇದಿಕ್ ಕಾಲೇಜಿನ ರಸ್ತೆಯ ಬದಿಗಳಲ್ಲಿ ಹಾಗೂ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಕೃಷಿ ಮೇಳ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್, ಪದಾಧಿಕಾರಿಗಳಾದ ಸಂತೋಷ್ ಜಾಕೆ, ಡಾ.ಎನ್.ಎ.ಜ್ಞಾನೇಶ್, ದಿನೇಶ್ ಮಡಪ್ಪಾಡಿ, ಯಶ್ವಿತ್ ಕಾಳಂಮನೆ, ದೊಡ್ಡಣ್ಣ ಬರೆಮೇಲು, ಚಂದ್ರಶೇಖರ ಪೇರಾಲು, ಚಂದ್ರ ಕೋಲ್ಚಾರ್, ಪಿ.ಎಸ್.ಗಂಗಾಧರ, ರಜತ್ ಅಡ್ಕಾರ್, ಪ್ರಣವ ಸೌಹಾರ್ಧ ಸೌಹಾರ್ಧ ಸಹಕಾರಿ ಸಂಘದ ನಿರ್ದೇಶಕ ಸೋಮಪ್ಪ ನಾಯ್ಕ್, ರವಿಶಂಕರ್, ರಂಜಿತ್ ಅಡ್ತಲೆ ಮತ್ತಿತರರು ಉಪಸ್ಥಿತರಿದ್ದರು.