ಗೂನಡ್ಕದಲ್ಲಿ ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ, ಸಾಹಿತ್ಯ ಜಾತ್ರೆಯಲ್ಲಿ ಕನ್ನಡ ಭುವನೇಶ್ವರಿಯ ಅದ್ದೂರಿ ಮೆರವಣಿಗೆ, ಅಭೂತಪೂರ್ವ ಮೆರವಣಿಗೆಯಲ್ಲಿ ಹಾರಾಡಿತು ಸಾವಿರ ಸಾವಿರ ಕನ್ನಡ ಬಾವುಟ

0

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ನೇತೃತ್ವದಲ್ಲಿ ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಗೂನಡ್ಕ ಬೀಜದಕಟ್ಟೆಯ ಸಜ್ಜನ ಸಭಾಭವನದಲ್ಲಿ ಆರಂಭಗೊಂಡಿದೆ.

ಬೆಳಿಗ್ಗೆ ದೊಡ್ಡಡ್ಕ ಬೈಲೆ ರಸ್ತೆ ಬಳಿ ಕನ್ನಡ ಭುವನೇಶ್ವರಿಯ ಮೆರವಣಿಗೆ ಆರಂಭಗೊಂಡಿತು. ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮೆರವಣಿಗೆಯು ಬೀಜದಕಟ್ಟೆ ಮಾರ್ಗವಾಗಿ ಸಜ್ಜನ ಸಭಾಭವನಕ್ಕೆ ಬಂತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ವಿದ್ಯಾರ್ಥಿಗಳ ಕೈಯಲ್ಲಿ ಹಾರಾಡಿದ ಕನ್ನಡ ಧ್ವಜಗಳು ಮೆರವಣಿಗೆಗೆ ಹೊಸ ಮೆರುಗು ನೀಡಿತು.

ಆಕರ್ಷಕ ಸಿಂಗಾರಿ ಮೇಳ, ಯಕ್ಷಗಾನ ವೇಷ, ಕೀಲು ಕುದುರೆ, ಪೂರ್ಣ ಕುಂಭ ಸ್ವಗತ, ಮೆರವಣಿಗೆಯ ವಿಶೇಷತೆಯಾಗಿತ್ತು.

ಸಮ್ಮೇಳನಧ್ಯಕ್ಷ ಕೆ.ಆರ್.ಗಂಗಾಧರ್ ಅವರನ್ನು ಅಲಂಕೃತ ವಾಹನದಲ್ಕಿ ಕರೆತರಲಾಯಿತು.


ಅಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ರಾಷ್ಟ್ರಧ್ವಜಾರೋಹಣಗೈದರು., ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು., ಕಸಾಪ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ಮಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.