ಗೂನಡ್ಕದಲ್ಲಿ ಸುಳ್ಯ ತಾಲೂಕು 26 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ, ಸಾಹಿತ್ಯದಿಂದ ಸಮಾನತೆಯ ಮತ್ತು ಸ್ವಾತಂತ್ರ್ಯದ ಮೌಲ್ಯ: ಎಸ್.ಆರ್. ವಿಜಯಶಂಕರ್ ಪ್ರತಿಪಾದನೆ

0

ಪಶ್ಚಿಮದ ಪ್ರಭಾವದಲ್ಲಿ ಯಾವುದನ್ನು ಉಳಿಸಬೇಕು, ಯಾವುದನ್ನು ಬೆಳೆಸಬೇಕು, ಯಾವುದನ್ನು ತ್ಯಜಿಸಬೇಕು ಎಂದು ಕಲಿಸಿಕೊಟ್ಟದ್ದು ಸಾಹಿತ್ಯ. ಸಮಾನತೆಯ ಮತ್ತು ಸ್ವಾತಂತ್ರ್ಯದ ಮೌಲ್ಯ ಸಾಹಿತ್ಯದ ಮೂಲಕ ಕಲಿತಿದ್ದೇವೆ ಎಂದು ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ನೇತೃತ್ವದಲ್ಲಿ ಗೂನಡ್ಕ ಬೀಜದಕಟ್ಟೆಯ ಸಜ್ಜನ ಸಭಾಭವನದ ಬಳಿಯ ಡಾ.ಶಿವರಾಮ ಕಾರಂತ ಸಭಾಭವನದ ಪ್ರೊ. ನಿಸಾರ್ ಅಹಮ್ಮದ್ ವೇದಿಕೆಯಲ್ಲಿ ನಡೆದ ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಜೀವನ ಮತ್ತು ಸುಸಂಸ್ಕೃತಿಯ ರಕ್ಷಣೆಯ ಕೆಲಸ ಸಂಸ್ಕೃತಿ ಮಾಡುತ್ತದೆ. ಸಂಸ್ಕೃತಿ ಮತ್ತು ಸಾಹಿತ್ಯದ ಅವಿಭಾವ ಸಂಬಂಧ ಭಾಷೆ. ಭಾಷೆಯ ಬಗೆಗಿನ ಚಿಂತನೆ ಇಂತಹ ಸಮ್ಮೇಳನಗಳಿಂದ ಸಾಧ್ಯವಾಗುತ್ತದೆ ಎಂದು ವಿಜಯ ಶಂಕರ್ ಹೇಳಿದ್ದರು.

ಹಿಂಗಾರ ಅರಳಿಸಿ ಚಾಲನೆ ನೀಡಿದ ಸಚಿವ ಎಸ್. ಅಂಗಾರ ಮಾತನಾಡಿ, ಸಮ್ಮೇಳನಗಳ ಮೂಲಕ ಕನ್ನಡ ಜಾಗೃತಿ ಸಾಧ್ಯವಾಗುತ್ತದೆ. ಇಂತಹ ಸಮ್ಮೇಳನಗಳಲ್ಲಿ ಸಮಾಜಕ್ಕೆ ಪೂರಕವಾದ ಯೋಚನೆಗಳು ಸೃಷ್ಟಿಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಾ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಯ ದೃಷ್ಟಿಯಲ್ಲಿ ಪೂರ್ಣ ಪ್ರಯತ್ನ ಮಾಡುತ್ತಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ವಹಿಸಿದ್ದರು.

ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆಯವರು ಹೊಸ ಕೃತಿಗಳನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ ರಾಮ್ ಸುಳ್ಳಿ ಭಾಗವಹಿಸಿದ್ದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಪೂವಪ್ಪ ಕಣಿಯೂರು ನಿಕಟಪೂರ್ವಾಧ್ಯಕ್ಷರ ನೆಲೆಯಲ್ಲಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಸಮ್ಮೇಳನದ ಆಶಯ ನುಡಿಗಳನ್ನಾಡಿದರು. ಸ್ವಾಗತ ಸಮಿತಿ ಪೋಷಕಾಧ್ಯಕ್ಷ ಡಾ. ಲೀಲಾಧರ್ ಡಿ.ವಿ. ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಪ್ರೊ. ಸಂಜೀವ ಕುದ್ಪಾಜೆ ಸ್ಮರಣ ಸಂಚಿಕೆ ಸಂಪಾದಕರ ನುಡಿಗಳನ್ನಾಡಿದರು.

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಸ್ವಾಗತಿಸಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಸ್ತಾವನೆಗೈದರು.
ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಹೊಸ ಕೃತಿಗಳ ಬಿಡುಗಡೆ:

ಸಮಾರಂಭದಲ್ಲಿ ಲೀಲಾ ದಾಮೋದರ ಅವರ ಅನುವಾದಿತ ಕೃತಿ ಕುರು ಸಾಮ್ರಾಜ್ಞಿ, ಚಂದ್ರಾವತಿ ಬಡ್ಡಡ್ಕ ಅವರ ಲಘು ಬಿಗು ಹಾಗೂ ಚಂದ್ರಕ್ಕನ ಪೊಳ್ಮೆ, ಪಿ.ಜಿ.ಅಂಬೆಕಲ್ಲುರವರ ಅವರವರ ಕಣ್ಣ್‌ಲಿ, ಡಾ. ಪ್ರಭಾಕರ ಶಿಶಿಲ ಅವರ ಅನುವಾದಿತ ಕೃತಿ ನಲಿಕೆದ ನವಿಲು ಹಾಗೂ ಕೆ.ಆರ್. ಗಂಗಾಧರ್ ಅವರ .ಅನುವಾದಿತ ಕೃತಿಗಳು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಂಡವು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ., ಕೋಶಾಧಿಕಾರಿ ದಯಾನಂದ ಆಳ್ವ, ಸ್ವಾಗತ ಸಮಿತಿ ಪೋಷಕಾಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಸಂತೋಷ್ ಕುತ್ತಮೊಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.