ಸುಳ್ಯ : ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್ ಸಂಚಾಲಕ ಹಿದಾಯತ್ ಅಡ್ಡೂರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ

0

ಸಾಮಾಜಿಕ ಕಾರ್ಯಕರ್ತ ಅಂತಾರಾಷ್ಟ್ರೀಯ ವಿಶ್ವ ಮಾನ್ಯ ಪ್ರಶಸ್ತಿ ಪುರಸ್ಕೃತ ಹಿದಾಯತ್ ಅಡ್ಡೂರ್ ಡಿ.10 ರಂದು ಸುಳ್ಯಕ್ಕೆ ಬಂದಿದ್ದ ಸಂದರ್ಭ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿದಾಯತ್ ಅಡ್ಡೂರ್ ರವರು ಯುಎಇ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಗಲ್ಫ್ ಕನ್ನಡಿಗರ ಸಮಸ್ಯೆಯ ಬಗ್ಗೆ ಸರಕಾರದ ಗಮನ ಸೆಳೆಯಲು ಅಂತಾರಾಷ್ಟ್ರೀಯ ಕನ್ನಡಿಗಾಸ್ ಹೆಲ್ಪ್ ಲೈನ್ ಮೂಲಕ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿದವರಾಗಿದ್ದಾರೆ.


ಕೋವಿಡ್ ಸಂದರ್ಭದಲ್ಲಿ ಕೊರೋನ ಯೋಧರಾಗಿ ಕಾರ್ಯ ನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಗಲ್ಫ್ ರಾಷ್ಟ್ರ ಗಳಿಗೆ ಉದ್ಯೋಗ, ಪ್ರವಾಸಕ್ಕೆ ತೆರಳಿ ಯಾರಾದರೂ ಅಲ್ಲಿ ನಿಧನ ಹೊಂದಿದರೆ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದ ಸುಳ್ಯದ ಕನಕಮಜಲು ನಿವಾಸಿ ಶಶಿಕಲಾ ಎಂಬವರು ದುಬೈರಾಷ್ಟ್ರದಲ್ಲಿ ಸಂಕಷ್ಟದಲ್ಲಿದ್ದಾಗ ತಾಯ್ನಾಡಿಗೆ ಮರಳಲು ಇವರ ಹೆಲ್ಪ್ ಲೈನ್ ಯಶಸ್ವಿಯಾಗಿತ್ತು.

ಈ ಸಂದರ್ಭ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿಎಂ ಶಹೀದ್, ಜನತಾ ಗ್ರೂಪ್ಸ್ ರಿಜ್ವಾನ್ ಅಹಮದ್, ಮುಖಂಡರುಗಳಾದ ಸಿದ್ದೀಕ್ ಕೊಕೊ, ಹನೀಫ್ ಕುಂಡಿಲ್, ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್ ಉಪಸ್ಥಿತರಿದ್ದರು.