ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ರಜತ ಸಂಭ್ರಮಕ್ಕೆ ಚಾಲನೆ, ಕುಮಾರ ಪರ್ವ 2022 ಉದ್ಘಾಟನೆ, ಕುಮಾರ ಪರ್ವ ಬೆಳವಣಿಗೆಯ ದಾರಿಯ ಅನಾವರಣ : ಭೀಮೇಶ್ವರ ಜೋಶಿ ಶ್ಲಾಘನೆ

0

ನಿಸ್ವಾರ್ಥ ಸಮಾಜ ಸೇವಕ ಕುಮಾರ ನಾಯರ್ ಸ್ಥಾಪಿಸಿದ ಕುಮಾರ ಸ್ವಾಮಿ ವಿದ್ಯಾಲಯದ ಬೆಳವಣಿಗೆಯ ದಾರಿಯ ಅನಾವರಣವೇ ಕುಮಾರ ಪರ್ವ ಸಂಭ್ರಮ ಎಂದು ಹೊರನಾಡು ಆದಿ ಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್‌ನಿಂದ ಪ್ರವರ್ತಿತವಾಗಿರುವ ಕುಮಾರಸ್ವಾಮಿ ವಿದ್ಯಾಲಯದ ರಜತ ಸಂಭ್ರಮ ಕಾರ್ಯಕ್ರಮ ಕುಮಾರ ಪರ್ವ -2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲದರ ಕುರಿತು ಅರಿವು ಪಡೆಯುವ, ವಿಮರ್ಶೆ ಮಾಡುವ ಮೊದಲು ತನ್ನತನದ ಅರಿವು ಮತ್ತು ಸ್ವ ವಿಮರ್ಶೆ ಮಾಡಿಕೊಳ್ಳಬೇಕು. ಹೀಗೆ ಮಾಡಿದವ ನಿತ್ಯ ಸಂತೋಷಿಯಾಗುತ್ತಾನೆ. ಅದಾಗದೇ ಇದ್ದರೆ ಸಮಾಜದಲ್ಲಿ ಕ್ಷೋಭೆ, ತೊಂದರೆ ಉಂಟಾಗುತ್ತದೆ ಎಂದ ಭೀಮೇಶ್ವರ ಜೋಶಿಯವರು, ವ್ಯಕ್ತಿಯಿಂದ ಪ್ರಾರಂಭವಾದ ಬದಲಾವಣೆಯ ಗಾಳಿ ಸಂಸಾರ, ಸಮಾಜ, ದೇಶ, ವಿಶ್ವದೆಡೆ ಸಾಗಿ ಶಾಂತಿ ನೆಲೆಸಲು ತಾವು ಕಲಿತ ವಿದ್ಯೆ, ಜ್ಞಾನ ಬಳಸಿಕೊಳ್ಳುವುದು ಎಲ್ಲರ ಗುರಿಯಾಗಲಿ ಎಂದರು.

ಕ್ರಿಯಾಶೀಲ ವ್ಯಕ್ತಿತ್ವ, ಸಮಾಜದೆಡೆಗೆ ಕಳಕಳಿ, ದೂರದರ್ಶಿತ್ವ, ಕರ್ತೃತ್ವ ಶಕ್ತಿಗೆ ಕುಮಾರ ನಾಯರ್ ಅತ್ಯುತ್ತಮ ಮಾದರಿ. ಅವರ ಎಲ್ಲ ಗುಣಗಳನ್ನು ಅವರ ಪುತ್ರರೂ ಹೊಂದಿರುವುದರಿಂದಲೇ ಸಂಸ್ಥೆ ಇಷ್ಟು ಎತ್ತರಕ್ಕೇರುವುದು ಸಾಧ್ಯವಾಯಿತು ಎಂದು ಜೋಶಿಯವರು ಹೇಳಿದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಕ್ರೀಡಾಂಗಣದ ತಡೆಗೋಡೆಗೆ ಶಿಲಾನ್ಯಾಸ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಭರಿತ ಶಿಕ್ಷಣ, ಭಾವನೆಗಳನ್ನು ಅರಿತ ಸಮಾಜದಿಂದ ಬದಲಾವಣೆ ಸಾಧ್ಯವಿದೆ . ಸಂಸ್ಕಾರ ಭರಿತ ಶಿಕ್ಷಣಕ್ಕೆ ಕುಮಾರಸ್ವಾಮಿ ಉತ್ತಮ ಉದಾಹರಣೆ ಎಂದು ಸಚಿವರು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಯ ಚಿಗುರು ಹಸ್ತ ಪತ್ರಿಕೆ ಬಿಡುಗಡೆ ಮಾಡಿದರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮಂಥನ ಮಾಹಿತಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತಾ ಗುಂಡಡ್ಕ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಫ್ಲ್ಯಾನ್ ಸಮಿತಿ ಅಧ್ಯಕ್ಷ ಕಿಶೋರ್‌ಕುಮಾರ್ ಕೂಜುಗೋಡು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಡಬದ ಹಿರಿಯ ವೈದ್ಯರಾದ ಡಾ. ಸಿ.ಕೆ.ಶಾಸ್ತ್ರಿ ಅವರಿಗೆ ಕುಮಾರ ನಾಯರ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ ಎನ್.ಕೆ., ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಏನೆಕಲ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಎಚ್., ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ಸಂಕೀರ್ತ್ ಹೆಬ್ಬಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಸಾದ್ ಮುನಿಯಂಗಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ, ಶಾಲಾ ವಿದ್ಯಾರ್ಥಿ ನಾಯಕ ಹಾರ್ದಿಕ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಂದ್ರಶೇಖರ ನಾಯರ್ ಎನ್.ಕೆ. ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾರತ್ನ ವರದಿ ವಾಚಿಸಿದರು ಜಶ್ಮಿತಾ ವಂದಿಸಿದರು.. ಸ್ಥಿಗ್ಧ ಮಲ್ಲಾರ, ಶ್ರಾವ್ಯ ರೈ, ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.