ಸುಳ್ಯದಲ್ಲಿ ಕೃಷಿ ಮೇಳದ ಉದ್ಘಾಟನೆ : ಕೃಷಿ‌ ಜಾತ್ರೆಗೆ ಅಧಿಕೃತ ಚಾಲನೆ, ಕೃಷಿಕರಿಗೆ ಸನ್ಮಾನ : ಹಸಿರು ವನ ಬೆಳೆಸಿದ ಶಾಲೆಗೆ ಗೌರವ

0

ಹಿರಿಯರು ಕೃಷಿಯೇ ಜೀವನಾಧಾರವಾಗಿಸಿದ್ದರಿಂದ ಆರೋಗ್ಯ ಪೂರ್ಣ ಬದುಕು ಸಾಗಿಸಿದರು.‌ಆದರೆ ಇಂದು ನಾವು ಆಧುನಿಕತೆಯ ಧಾವಂತಕ್ಕೆ ಸಿಲುಕಿ ಕೃಷಿಯಿಂದ ದೂರ ಉಳಿದಿದ್ದೇವೆ. ನೆಮ್ಮದಿಯ ಬದುಕು ಕಾಣುತ್ತಿಲ್ಲ.‌ಆದ್ದರಿಂದ ಕೃಷಿಯನ್ನೇ ಬದುಕಾಗಿಸೋಣ ಜತೆಗೆ ಸಾವಯವ ಕೃಷಿಗೆ ಆದ್ಯತೆ ನೀಡೋಣ” ಎಂದು
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ‌ ನಡೆಯುತ್ತಿರುವ ಪಯಸ್ವಿನಿ ಕೃಷಿ ಮೇಳವನ್ನು ದೀಪಪ್ರಜ್ವಲಿಸಿ ಬಳಿಕ ಆಶೀರ್ವಚನಗೈದರು.

ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಿದ್ದರು. “ನಮ್ಮ ಹೆತ್ತವರು ಕೃಷಿ ಮಾಡಿ ನಮ್ಮನ್ನು ಬೆಳೆಸಿದ್ದಾರೆ. ಇಂದು ಕಲಿತು ಉದ್ಯೋಗಕ್ಕೆ ಹೋಗುವ ಯುವಕರು ತಾವು ಬೆಳೆದು ಬಂದ ಕೃಷಿ ಜೀವನವನ್ನು ಮರೆಯದೇ ಕೃಷಿಯಲ್ಲಿಯೂ ತೊಡಗಿಸಿಕೊಳ್ಳಬೇಕು” ಎಂದು‌ ಹೇಳಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ, ಚಿತ್ರ ನಟ ಶಿವಧ್ವಜ್ ಶೆಟ್ಟಿಯವರು ಮಾತನಾಡಿ ಕೃಷಿಕರಾದ ನಾವು ಕೃಷಿ ಜೀವನವನ್ನು ಮರೆಯಬಾರದು.‌ ಅದನ್ನು ಮರೆತು ಯಾವುದೇ ಕ್ಷೇತ್ರಕ್ಕೆ ಹೋದರೂ ಕೊರೊನಾದಂತ ದಿನಗಳು ಬಂದರೆ ನಾವು ಅತಂತ್ರರಾಗುತ್ತೇವೆ. ಆದ್ದರಿಂದ ಕೃಷಿಯನ್ನೇ ಮೂಲಗಿಟ್ಟು ನಾವು ಮುನ್ನಡೆಯಬೇಕು” ಎಂದು ಹೇಳಿದರು.

ಪಾರಂಪರಿಕ ‌ಗ್ರಾಮವನ್ನು ಮಂಗಳೂರು ವಿವಿ ಉಪಕುಲಪತಿ ಡಾ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿದರು. “ಕೃಷಿ ಪರಂಪರೆ ನಮ್ಮ ಮೂಲ ಸಂಸ್ಕೃತಿ.‌ ಈ ಕುರಿತು ಯುವ ಜನತೆ ತಿಳಿದು ಇದರಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯೆ ಉಳ್ಳವರಿಗಿಂತ ಕೃಷಿಕರು ಹೆಚ್ಚು ಪ್ರಜ್ಞಾವಂತರಾಗಿರುತ್ತಾರೆ” ಎಂದು ಅವರು ಹೇಳಿದರು.

ಪುಟ್ಟಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಮುಖ್ಯ ಅತಿಥಿಗಳಾಗಿದ್ದರು.

ಕೃಷಿ ಮೇಳದ ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್, ಕೋಶಾಧಿಕಾರಿ ಸಂತೋಷ್ ಜಾಕೆ ವೇದಿಕೆಯಲ್ಲಿ ಇದ್ದರು.

ಪಾರಂಪರಿಕ ಗ್ರಾಮದ ಪ್ರಾಯೋಜಕತ್ವ ವಹಿಸಿದ ವಿವಿ ಉಪ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಗೌರವಿಸಲಾಯಿತು.

ಯಾಪ್ ಬಿಡುಗಡೆ : ಸುಳ್ಯ ರೈತ ಉತ್ಪಾದಕ ಕಂಪೆನಿ ಅಮೆಝೋನ್ ಮೂಲಕ ಜೇನುಕೃಷಿ ಕೃಷಿ‌ ಮಾರಾಟದ ಯಾಪ್ ಬಿಡುಗಡೆಯು ಇದೇ ಸಂದರ್ಭದಲ್ಲಿ ನಡೆಯಿತು. ರಾಜಶೇಖರಾನಂದ ಸ್ವಾಮೀಜಿಯವರು‌ ಬಿಡುಗಡೆ ಮಾಡಿದರು.
ಕೃಷಿ ಮೇಳಕ್ಕೆ ಪಯಸ್ವಿನಿ ಹೆಸರು ಸೂಚಿಸಿದ ಸಂತೋಷ್ ರನ್ನು ಸಮಾರಂಭದಲ್ಲಿ‌ ಗೌರವಿಸಲಾಯಿತು.

ಕೃಷಿ ಸಾಧಕರಿಗೆ ಸನ್ಮಾನ : ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಹರಿಯಪ್ಪ ಗೌಡ ಚೀಮುಳ್ಳು, ತಿರುಮಲೇಶ್ವರ ಭಟ್ ಕುರಿಯಾಜೆ, ಶ್ರೀಮತಿ ವಸಂತಿ‌ ಜನಾರ್ದನ ನಡುಮುಟ್ಲುರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರ್ವಹಿಸಿದರು.

ಹಸಿರುವನ ಶಾಲೆ ಗೌರವ : ಶಾಲೆಯಲ್ಲಿ ಹಸಿರು ತೋಟ ನಿರ್ಮಿಸಿದ ಸುಳ್ಯದ ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆ ಯನ್ನು ಸಮಾರಂಭದಲ್ಲಿ ರೂ.5 ಸಾವಿರ ನಗದಿನೊಂದಿಗೆ ಗೌರವಿಸಲಾಯಿತು.

ಶಿವಪ್ರಸಾದ್ ಆಲೆಟ್ಟಿ ಮತ್ತು ಬಳಗದವರು ರೈತ ಗೀತೆ ಹಾಡಿದರು. ಸ್ವಾಗತ ಸಮಿತಿ ಕೃಷಿ ಮೇಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಆರ್. ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು.
ಭವಾನಿಶಂಕರ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

ಪಯಸ್ವಿನಿ ಹಾಡು : ಪಯಸ್ವಿನಿ ಕೃಷಿ ಮೇಳದ ಕುರಿತು ಶ್ರೀಮತಿ ಸೌಮ್ಯ ಗುರು ಕಾರ್ಲೆಯವರು ರಚಿಸಿದ ಗೀತೆಯನ್ನು, ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಹಾಡಿದರು.