ಪಂಬೆತ್ತಾಡಿ ಗ್ರಾಮದಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ, ಅಧಿಕಾರಿಗಳನ್ನು ಸ್ವಾಗತಿಸಿದ ಪಂಬೆತ್ತಾಡಿ – ಕಾಂತುಕುಮೇರಿ ರಸ್ತೆ ಅಭಿವೃದ್ಧಿಗೆ ಬಿಕ್ಷೆ ಬ್ಯಾನರ್, ಹುಂಡಿಬ್ಯಾನರ್ ತೆರವುಗೊಳಿಸುವಂತೆ ತಹಶಿಲ್ದಾರ್ ಒತ್ತಾಯ, ಬ್ಯಾನರ್ ತೆರವುಗೊಳಿಸಿದರೆ ಕಾರ್ಯಕ್ರಮದಿಂದ ಹೊರಗಡೆ ಇರುವುದಾಗಿ ಗ್ರಾಮಸ್ಥರ ಪಟ್ಟು, ರಸ್ತೆ ಅಭಿವೃದ್ಧಿಗೆ ದ್ವಾರದಲ್ಲಿ ಹುಂಡಿ

0

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾ.ಪಂ. ವ್ಯಾಪ್ತಿಯ ಪಂಬೆತ್ತಾಡಿ ಸಹಕಾರಿ ಸಂಘದ ಬಳಿ ತಹಶೀಲ್ದಾರ್ ಮತ್ತು ಇಲಾಖಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಡಿ. 17ರಂದು ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಳ್ಯ ತಹಶಿಲ್ದಾರ್ ಕು. ಅನಿತಾ ಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ಕಲ್ಮಡ್ಕ ಗ್ರಾ.ಪಂ. ಸದಸ್ಯರಾದ ಪವಿತ್ರಾ ಕುದ್ವ, ಮೀನಾಕ್ಷಿ, ಮೋಹಿನಿ, ಲೋಕೇಶ ಆಕ್ರಿಕಟ್ಟೆ, ಜಯಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲ್ಮಡ್ಕ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಉಪ ತಹಶಿಲ್ದಾರ್ ಚಂದ್ರಕಾಂತ್ ಕಾರ್ಯಕ್ರಮ ನಿರೂಪಿಸಿದರು. ಹಲವು ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕರಿಕ್ಕಳ ಪಂಬೆತ್ತಾಡಿ ರಸ್ತೆ ಆರಂಭವಾಗುವ ಕರಿಕ್ಕಳದಲ್ಲಿ ಪಂಬೆತ್ತಾಡಿ – ಕಾಂತುಕುಮೇರಿ ರಸ್ತೆ ಅಭಿವೃದ್ಧಿಗೆ ಭಿಕ್ಷೆ ಎನ್ನುವ ಫಲಕ ಗ್ರಾಮ ವಾಸ್ತವ್ಯಕ್ಕೆ ಬರುವ ಅಧಿಕಾರಿಗಳನ್ನು ಸ್ವಾಗತಿಸುತ್ತಿತ್ತು. ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ಕು. ಅನಿತಾ ಲಕ್ಷ್ಮೀಯವರು ಪಂಬೆತ್ತಾಡಿಯಲ್ಲಿ ನೊಂದ ಗ್ರಾಮಸ್ಥರು ರಸ್ತೆಬದಿ ಹಾಕಿದ್ದ “ಮಂಗ ಮಾಡಿದ ನಾಯಕರಿಗೆ ಸ್ವಾಗತ” “ಪ್ರಗತಿಯ ನೆನೆಗುದಿಯಲ್ಲಿ ಪಂಬೆತ್ತಾಡಿ ಗ್ರಾಮ” ಎಂಬ ಸುಮಾರು 20ರಷ್ಟು ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಹೇಳಿದರಲ್ಲದೆ, ಬ್ಯಾನರ್ ತೆರವುಗೊಳಿಸದಿದ್ದರೆ ಸಭಾಂಗಣಕ್ಕೆ ಬರುವುದಿಲ್ಲ ಎಂದರು.
ಇದಕ್ಕೆ ಗ್ರಾಮಸ್ಥರು ” ಬ್ಯಾನರ್ ಅಳವಡಿಸಿರುವುದು ನಮ್ಮ ಬೇಡಿಕೆ. ನಮ್ಮ ಕಷ್ಟ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ಬರಲೆಂದು ಬ್ಯಾನರ್ ಹಾಕಿದ್ದೇವೆ. ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತಿದ್ದೇವೆ. ಆಶ್ವಾಸನೆ ಮಾತ್ರ ದೊರಕಿದೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಬ್ಯಾನರ್ ಹಾಕಿದ್ದೇವೆ. ನೀವು ಬ್ಯಾನರ್ ಈಗಲೇ ತೆರವುಗೊಳಿಸಲೇಬೇಕೆಂದು ಹೇಳಿದರೆ ನಾವು ಸಭಾತ್ಯಾಗ ಮಾಡುತ್ತೇವೆ” ಎಂದು ಹೇಳಿದರು. ” ಈ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದಲೇ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದೇವೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡುತ್ತೇನೆ” ಎಂದು ತಹಶೀಲ್ದಾರರು ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು.

ಬಳಿಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರ ಪರವಾಗಿ ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಪ್ರಮುಖವಾಗಿ ಪಂಬೆತ್ತಾಡಿ ಕಾಂತುಕುಮೇರಿ ರಸ್ತೆ ಸೇರಿದಂತೆ ಹಲವು ರಸ್ತೆಗಳ ಅಭಿವೃದ್ಧಿಯ ಬೇಡಿಕೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಸಮಸ್ಯೆಗಳನ್ನು ವಿವರಿಸಿ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಉತ್ತರಿಸಬೇಕೆಂದು ಹೇಳಿದರು. ಇದಕ್ಕೆ ಜಿ.ಪಂ. ಕಿರಿಯ ಅಭಿಯಂತರರಾದ ಜನಾರ್ಧನ್ ರವರು ಕಾಂತುಕುಮೇರಿ ರಸ್ತೆಗೆ 30 ಲಕ್ಷ ಅನುದಾನ ನೀಡಿ ಟೆಂಡರ್ ಆಗಿದೆ ಎಂದರು. ಇದಕ್ಕೆ ಪಂಬೆತ್ತಾಡಿ ಸಹಕಾರಿ ಸಂಘದ ನಿರ್ದೇಶಕ ವೆಂಕಪ್ಪ ಎನ್.ಪಿ.ಯವರು ಕೇವಲ ರೂ. 30 ಲಕ್ಷದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.‌ ಅಂಗಾರರು 30 ವರ್ಷಗಳಿಂದ ಶಾಸಕರಾಗಿದ್ದು ಈ ರಸ್ತೆಯ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ. ಎಂದು ಆಕ್ರೋಶದಿಂದ ಮಾತನಾಡಿದರು. ಇದಕ್ಕೆ ಹಲವು ಗ್ರಾಮಸ್ಥರು ಧ್ವನಿಗೂಡಿಸಿದರು. ಸಾರ್ವಜನಿಕರು ಏರು ಧ್ವನಿಯಲ್ಲಿ ಇಂಜಿನಿಯರ್ ರನ್ನು ತರಾಟೆಗೆ ತೆಗೆದುಕೊಂಡಾಗ ಮಧ್ಯಪ್ರವೇಶಿಸಿದ ತಹಶಿಲ್ದಾರ್ ನಾವು ಗ್ರಾಮದ ಸಮಸ್ಯೆಗಳನ್ನು ಆಲಿಸುವುದಕ್ಕೆ ಬಂದಿದ್ದೇವೆ. ಬೇಡಿಕೆಯನ್ನು ಬರವಣಿಗೆಯಲ್ಲಿ ನೀಡಿ ಎಂದರು. ಬಳಿಕ ಗ್ರಾಮಸ್ಥರು ಮನವಿಗಳನ್ನು ತಹಶಿಲ್ದಾರ್ ರಲ್ಲಿ ನೀಡಿದರು. ಕಲ್ಮಡ್ಕ ಗ್ರಾ.ಪಂ. ಸಿಬ್ಬಂದಿಗಳು ಸಹಕಾರ ನೀಡಿದರು.