ಡಿ.24ರಿಂದ 28 ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಕಿರು ಷಷ್ಠಿ ವೈಭವ, ರಾಷ್ಟ್ರ ವ್ಯಾಪ್ತಿಯ ತಂಡಗಳಿಂದ ಸಾಂಸ್ಕೃತಿಕ ವೈಭವ : ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿಡಿ.೨೪ರಿಂದ ಡಿ.೨೮ರ ತನಕ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಕಿರುಷಷ್ಠಿ ಮಹೋತ್ಸವವು ಜರುಗಲಿದೆ.ಮಹೋತ್ಸವದ ನಿಮಿತ್ತ ರಾಷ್ಟ್ರ ವ್ಯಾಪ್ತಿಯ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಡಿ.24ರಂದು ಸಂಜೆ 6ಗಂಟೆಗೆ ಶ್ರೀ ದೇವರ ಕಿರುಷಷ್ಠಿ ರಥೋತ್ಸವ ಜರುಗಲಿದೆ. ಸರ್ವ ಭಕ್ತರು ಕಿರುಷಷ್ಠಿ ಮಹೋತ್ಸವಕ್ಕೆ ಆಗಮಿಸಿಸ ಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.
ಶ್ರೀ ದೇವಳದ ಆಡಳಿತ ಕಚೇರಿಯಲ್ಲಿ ಡಿ.21 ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶ್ರೀ ದೇವಳದ ರಥಬೀದಿ ವೃತ್ತದ ಬಳಿ ನೂತನವಾಗಿ ನಿರ್ಮಿತವಾದ ಕಾರ್ತಿಕ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಉಪನ್ಯಾಸ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ನಡೆಯಲಿದೆ ಎಂದರು.

ಗೋಡ್ಕಿಂಡಿ- ಮೇವುಂಡಿ ಜುಗಲ್‌ಬಂಧಿ:

ಡಿ.೨೪ರಂದು ಸಂಜೆ ೫ ಗಂಟೆಗೆ ನೂತನ ಕಾರ್ತಿಕ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಉದ್ಘಾಟಿಸಲಿದ್ದಾರೆ. ಬಳಿಕ ಸ್ಥಳೀಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ ೭ಗಂಟೆಯಿಂದ ೧೦ ಗಂಟೆಯ ತನಕ ಖ್ಯಾತ ಕಲಾವಿದ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಮತ್ತು ಪಂಡಿತ್ ಜಯತೀರ್ಥ ಮೇವುಂಡಿ ಇವರಿಂದ ಹಿಂದೂಸ್ತಾನಿ ಜುಗಲ್‌ಬಂಧಿ ನೆರವೇರಲಿದೆ. ಇವರಿಗೆ ತಬಲಾದಲ್ಲಿ ಮಾಯಾಂಕ್ ಬಡೇಕರ್ ಹಾಗೂ ಹಾರ್ಮೋನಿಯಂನಲ್ಲಿ ವಿದ್ವಾನ್ ನರೇಂದ್ರ ನಾಯಕ್ ಸಹಕರಿಸಲಿದ್ದಾರೆ. ಡಿ.೨೫ರಂದು ಸಂಜೆ ೫.೩೦ರಿಂದ ಸುಮಾ ಕೋಟೆ ಇವರಿಂದ ಭಕ್ತಿ-ಭಾವ ಸಂಗಮ ನೆರವೇರಲಿದೆ. ಬಳಿಕ ಸಂಜೆ ೭ರಿಂದ ೧೦ರ ತನಕ ಕನಕ ಕಲಾಗ್ರಾಮ ಕಲಾ ತಂಡ ಸುಳ್ಯ ಮತ್ತು ಗುರುದೇವ ಲಲಿತ ಕಲಾ ಅಕಾಡೆಮಿ ಮಂಡ್ಯ ಇವರಿಂದ ಡಾ.ಚೇತನ ರಾಧಾಕೃಷ್ಣ ಪಿ.ಎಂ ಇವರ ನಿರ್ದೇಶನದಲ್ಲಿ ಶಾಸ್ತ್ರೀಯ ವ್ಯವಿಧ್ಯ ನೃತ್ಯ ಕಲಾ ಪ್ರಾಕಾರಗಳ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.

ಸುಬ್ರಹ್ಮಣ್ಯ ವೈಭವಂ:
ಡಿ.೨೬ರಂದು ಸಂಜೆ ೫ರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಯಕ್ಷ ತಂಡದಿಂದ ಮಹಿಷ ವಧೆ ಯಕ್ಷಗಾನ ನಡೆಯಲಿದೆ.ಸಂಜೆ ೭ರಿಂದ ೧೦ರ ತನಕ ನವರಂಗ ಟ್ರಸ್ಟ್ ಹಾಗೂ ನಾಟ್ಯ ಭೈರವಿ ನೃತ್ಯ ಶಾಲೆ ಬೆಂಗಳೂರು ಇವರಿಂದ “ಶ್ರೀ ಸುಬ್ರಹ್ಮಣ್ಯ ವೈಭವಂ” ನೃತ್ಯ ನಾಟಕ ಹಾಗೂ ಭರತನಾಟ್ಯ ವೈಭವ ನೆರವೇರಲಿದೆ.

ಡಿ.೨೭ರಂದು ಸಂಜೆ ೫ ಗಂಟೆಯಿಂದ ವಿಶ್ವ ಮೋಹನ ಕಲಾ ಶಾಲೆ ಕಡಬದ ವಿದ್ಯಾರ್ಥಿಗಳಿಂದ ಮಾನಸ ಪುನೀತ್ ರೈ ನಿರ್ದೇಶನದಲ್ಲಿ ನೃತ್ಯ ವೈಭವ ನಡೆಯಲಿದೆ.ಸಂಜೆ ೭ರಿಂದ ೧೦ರ ತನಕ ಕೂಳೂರು ಜಯಚಂದ್ರ ರಾವ್, ಸಿದ್ದಾರ್ಥ ಬೆಳ್ಮಣ್, ಸತೀಶ್ ಅಮ್ಮಣ್ಣಾಯ ಮತ್ತು ಅರುಣ್ ಕುಮಾರ್ ತಂಡದಿಂದ ವಿಶೇಷ ಸಂಗೀತ ಕಾರ್ಯಕ್ರಮ ನೆರವೇರಲಿದೆ.ಡಿ.೮ರಂದು ಸಂಜೆ ೫ರಿಂದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಸಾಯಿ ನಾರಾಯಣ ಕಲ್ಮಡ್ಕ ನಿರ್ದೆಶನದಲ್ಲಿ ಅಮರ ಸಂಗ್ರಾಮ ೧೮೩೭ ಪ್ರದರ್ಶಿತವಾಗಲಿದೆ. ಬಳಿಕ ರಾತ್ರಿ ೯ರಿಂದ ಬಪ್ಪನಾಡು ಮೇಳದವರಿಂದ ಭಂಡಾರ ಚಾವಡಿ ಯಕ್ಷಗಾನ ಪ್ರದರ್ಶಿತವಾಗಲಿದೆ ಎಂದು ಮೋಹನರಾಂ ಸುಳ್ಳಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಧಾರ್ಮಿಕ ಉಪನ್ಯಾಸ:
ಡಿ.೨೮ರಂದು ಸಂಜೆ ೩.೩೦ರಿಂದ ಕಾರ್ತಿಕ ವೇದಿಕೆಯಲ್ಲಿ ಧಾರ್ಮಿಕ ಉಪನ್ಯಾಸ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ನೆರವೇರಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ವಹಿಸಲಿದ್ದಾರೆ.ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೋಭಾ ಗಿರಿಧರ್, ವನಜಾ ವಿ ಭಟ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.