ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂ.ಜಾ.ವೇ. ಯಿಂದ ಮನವಿ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಜಾತ್ರೆಯ ಸಂತೆ ಮೈದಾನದ ಏಲಂನಲ್ಲಿ ಅನ್ಯಧರ್ಮೀಯರು ಭಾಗವಹಿಸಲು ಅವಕಾಶ ನೀಡದಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ದೇವಸ್ಥಾನದ ಅನುವಂಶಿಕ ಆಡಳಿತ ಮೊತ್ತೇಸರರಿಗೆ ಮತ್ತು ಜೀರ್ಣೋದ್ದಾರ ಸಮಿತಿಯವರಿಗೆ ಮನವಿ ಸಲ್ಲಿಸಲಾಯಿತು.
ದೇವಸ್ಥಾನದ ಆಡಳಿತ‌ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ರಿಗೆ‌ಮನವಿ ನೀಡಲಾಗಿದೆ.

ಸುಳ್ಯ ತಾಲೂಕಿನ ಶ್ರೀ ಚೆನ್ನಕೇಶವ ದೇವಸ್ಥಾನವು ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದೆ. ಎಲ್ಲಾ ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡುವ ದೇವಸ್ಥಾನವಾಗಿದ್ದು, ಸಾವಿರಾರು ಭಕ್ತಾದಿಗಳು ಪ್ರತಿದಿನ ಬಂದು ಪೂಜೆ ನೆರವೇರಿಸುತ್ತಾರೆ. ದೇವಸ್ಥಾನವು ಕರ್ನಾಟಕ ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಪ್ರತಿ ಜನವರಿ ತಿಂಗಳಲ್ಲಿ ಜಾತ್ರೋತ್ಸವವು ರಥೋತ್ಸವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಲಕ್ಷಾಂತರ ಭಕ್ತರು ಈ ವೇಳೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಜಾತ್ರೋತ್ಸವದ ವೇಳೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಉಪಯೋಗಕ್ಕಾಗಿ ದೇವಸ್ಥಾನದ ಎದುರು ಭಾಗದಲ್ಲಿ ಸಂತೆ ಮೈದಾನದಲ್ಲಿ ಬೇರೆ ಬೇರೆ ಉಪಕರಣಗಳನ್ನು ತಿಂಡಿ- ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿ ವ್ಯಾಪಾರ ಮಾಡಲಾಗುತ್ತದೆ. ಈ ವ್ಯಾಪಾರದಲ್ಲಿ ಅನ್ಯಧರ್ಮಿಯರು ಭಾಗವಹಿಸುತ್ತಾರೆ. ಆದರೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮದ ಪ್ರಕಾರ ಹಿಂದೂ ಧಾರ್ಮಿಕ ಕ್ಷೇತ್ರಗಳ ಯಾವುದೇ ಕಾರ್ಯಕ್ರಮದಲ್ಲಿ ಅನ್ಯಧರ್ಮಿಯರು ಯಾವುದೇ ವ್ಯಾಪಾರ-ವ್ಯವಹಾರದಲ್ಲಿ ಭಾಗವಹಿಸುವಂತಿಲ್ಲ ಹಾಗೂ ದೇವಸ್ಥಾನದ ಯಾವುದೇ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ನಮೂದಿಸಲಾಗಿದೆ. ಆದರೂ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದ ಅನ್ಯಧರ್ಮಿಯರು ದೇವಸ್ಥಾನದ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವುದು ಸದ್ರಿ ಅದಿನಿಯಮಕ್ಕೆ ವಿರುದ್ಧವಾಗಿದೆ.

ಅಷ್ಟೇ ಅಲ್ಲದೆ ನಮ್ಮ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಅನ್ಯಧರ್ಮಿಯರಿಂದ ದೇವಸ್ಥಾನದ ಪಾವಿತ್ರತೆಗೆ ಧಕ್ಕೆಯಾಗಿರುವುದು,ಅಪಚಾರಗಳು ಆಗಿರುವ ಹಲವಾರು ಘಟನೆಗಳು ನಡೆದಿರುವುದು ಕಂಡು ಬಂದಿದ್ದು, ಈ ಹಿನ್ನೆಲೆ ಅನ್ಯಧರ್ಮಿಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಸುಳ್ಯ ನಗರ ಸಂಚಾಲಕರಾದ ನಿತೇಶ್ ಉಬರಡ್ಕ, ಹಿಂದೂ ಜಾಗರಣ ವೇದಿಕೆ ಸುಳ್ಯನಗರ ಸಹಸಂಚಾಲಕ ಪ್ರಶಾಂತ್ ಆಚಾರ್ಯ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.