ಕೂಜುಗೋಡು ಕಟ್ಟೆಮನೆ ಕುಟುಂಬಕ್ಕೆ ಶೃಂಗೇರಿ ಜಗದ್ಗುರು ಮಹಾಸಂಸ್ಥಾನದಿಂದ ನಿರೂಪ ನೀಡಿಕೆ, ಕೂಜುಗೋಡು- ಕಟ್ಟೆಮನೆ ತರವಾಡು ಟ್ರಸ್ಟ್ ನವರಿಂದ ಮಾಹಿತಿ

0

ಕೂಜುಗೋಡು – ಕಟ್ಟೆಮನೆ ಕುಟುಂಬಕ್ಕೆ ಗೌಡರ ಆಚಾರ ವಿಚಾರ ಸ್ಥಾನವಾದ ಶೃಂಗೇರಿ ಜಗದ್ಗುರು ಮಹಾಸಂಸ್ಥಾನದಿಂದ ಸಾಂಪ್ರದಾಯಿಕ ಹಕ್ಕು ಸ್ವಾಮ್ಯದ ನಿರೂಪ ಲಭಿಸಿದೆ ಎಂದು ಕೂಜುಗೋಡು ಕಟ್ಟೆಮನೆ ಕುಟುಂಬದ ಪ್ರಮುಖರು ತಿಳಿಸಿದ್ದಾರೆ.


ಈ ಕುರಿತು ಡಿ.೩೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟ್ ಹಾಗು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಸೋಮಶೇಖರ ಕೆ.ಎಸ್. ಪೂರ್ವಧರ್ಮ ಪರಿಪಾಲನೆಯ ಕಲ್ಪನೆಯೊಂದಿಗೆ ಶೃಂಗೇರಿ ಮಠದಿಂದ ಪೂರ್ವ ಕಾಲದ ಗುರು-ಶಿಷ್ಯ, ಧಾರ್ಮಿಕ ಪರಂಪರೆಯಂತೆ ಮಠದ ಶಿಷ್ಯರ ಧಾರ್ಮಿಕ ಯೋಗಕ್ಷೇಮ ಕಾರ್ಯಕ್ಕಾಗಿ ಸ್ವಜಾತಿ ಜನರ ಆಚಾರ ವಿಚಾರಗಳ ಉನ್ನತಿಗಾಗಿ ಮತ್ತು ಪೂರ್ವ ಸಂಪ್ರದಾಯ ಉಳಿಸಿ ಬೆಳೆಸುವುದಕ್ಕಾಗಿ ಹಿಂದೆಯೇ ಕೂಜುಗೋಡು ಕಟ್ಟೆಮನೆ ಕುಟುಂಬಕ್ಕೆ ನಿರೂಪ ನೀಡುವ ಪದ್ಧತಿ ಇತ್ತು. ಆದರೆ ಕಾಲಕ್ರಮದಲ್ಲಿ ಯಾವುದೋ ಕಾರಣಕ್ಕೆ ಅದು ಸ್ಥಗಿತಗೊಂಡಿತ್ತು. ಧಾರ್ಮಿಕ ಪರಂಪರೆ ಮತ್ತು ದೇವತಾ ಸೇವೆ ಮುಂದುವರಿಸಲು ನಿರೂಪವನ್ನು ಮತ್ತೆ ನೀಡಬೇಕು ಎಂದು ಕಳೆದ ಆಗಸ್ಟ್ ತಿಂಗಳಲ್ಲಿ ಶೃಂಗೇರಿ ಜಗದ್ಗುರುಗಳಿಗೆ ಕುಟುಂಬದವರು ಮನವಿ ಮಾಡಿದ್ದೆವು.

ಇದನ್ನು ಮನ್ನಿಸಿ ಜಗದ್ಗುರುಗಳು ಪೂರ್ವ ಸಂಪ್ರದಾಯದಂತೆ ನಿರೂಪವನ್ನು ನೀಡಿ ಹರಸಿದ್ದಾರೆ. ಹಿಂದಿನ ಕಾಲದಲ್ಲಿ ಕಟ್ಟೆಮನೆ ಕುಟುಂಬದ ಪೂರ್ವಿಕರು ಶ್ರೀ ಮಠಕ್ಕೆ ನಡೆಸಿಕೊಂಡು ಬಂದ ಧರ್ಮಾಚರಣೆ ಹಾಗು ದೇವತಾ ಕೈಂಕರ್ಯವನ್ನು ಪರಿಗಣಿಸಿ ಜಗದ್ಗುರುಗಳು ಆಶೀರ್ವಚನದೊಂದಿಗೆ ಸಾಂಪ್ರದಾಯಿಕ ಹಕ್ಕುದಾರರಾಗಿ ಶಿಶಿರ್ ಕಟ್ಟೆಮನೆಯವರಿಗೆ ನಿರೂಪವನ್ನು ೨೩ ನವೆಂಬರ್ ೨೦೨೨ರಂದು ನೀಡಿದ್ದಾರೆ ಎಂದು ಅವರು ವಿವರಿಸಿದರು.
ಮುಂದೆಯೂ ಮನೆತನದ ವತಿಯಿಂದ ಗುರು ಮಠದ ಸೇವೆ ಹಾಗು ಜನಾಂಗದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಮುಂದುವರಿಸಲಿದೆ. ಜನಾಂಗವನ್ನು ಒಗ್ಗೂಡಿಸಿ, ಆಚಾರ ವಿಚಾರಗಳನ್ನು, ವೈಶಿಷ್ಟ್ಯತೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಬೆಳೆಸಲು ಪ್ರಯತ್ನ ನಡೆಸಲಾಗುವುದು. ಸಮಾಜ ಬಾಂಧವರ ಒಗ್ಗೂಡಿಸುವಿಕೆ, ಧಾರ್ಮಿಕ ಯೋಗಕ್ಷೇಮ ಪರಿಪಾಲನೆ, ಧರ್ಮಾಚರಣೆಯನ್ನು ನಿರೀಕ್ಷಿಸಿ ಸಂರಕ್ಷಿಸುವ ಉzಶದಿಂದ ಮನೆತನ ಕಾರ್ಯನಿರ್ವಹಿಸಲಿದೆ. ಧಾರ್ಮಿಕ ಆಚರಣೆಗಳು ಪೂರ್ವ ಸಂಪ್ರದಾಯದಂತೆ ಸರಿಯಾಗಿ ನಡೆದರೆ ಸ್ವಸ್ಥ ಸಮಾಜ ನಿರ್ಮಾಣ ಹೇಗೆ ಸಾಧ್ಯವೋ ನಮ್ಮ ಜನಾಂಗದವರನ್ನು ಒಟ್ಟು ಗೂಡಿಸಿ ಜನಾಂಗದ ಆಚಾರ ವಿಚಾರಗಳನ್ನು ಏಕರೂಪದಲ್ಲಿ ವಲೀನಗೊಳಿಸಲು ಕಾರ್ಯ ನಡೆಯಲಿದೆ. ಈ ನಿಟ್ಟಿನಲ್ಲಿ ನಶಿಸಿ ಹೋಗುವ ಪರಂಪರೆಯನ್ನು ಮತ್ತೆ ಉಳಿಸಿ ಬೆಳೆಸಲಾಗುವುದು ಎಂದು ಅವರು ಹೇಳಿದರು.
ಶಿಷ್ಯ ಕರ್ತವ್ಯ ಪಟ್ಟದ ಅಧಿಕಾರದ ನಿರೂಪ ಸ್ಚೀಕರಿಸಿದ ಶಿಶಿರ್ ಕಟ್ಟೆಮನೆ ಮಾತನಾಡಿ
“ನಮಗೆ ನೀಡಿರುವ ಜವಾಬ್ದಾರಿಯನ್ನು ಕುಟುಂಬದ ಹಿರಿಯರ ಹಾಗೂ ಸಮುದಾಯದವರ ಸಲಹೆಯನ್ನು ಪಡೆದು ನಡೆಯುತ್ತೇನೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟ್‌ನ ಗೌರವಾಧ್ಯಕ್ಷ ಪದ್ಮಯ್ಯ ಗೌಡ ಕಟ್ಟೆಮನೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ಕೆ.ಎಸ್, ಟ್ರಸ್ಟ್‌ನ ಕೋಶಾಧಿಕಾರಿ ಲೋಕೇಶ್ .ಕೆ.ಎಸ್, ನಿರ್ದೇಶಕರಾದ ಜಯರಾಮ ಕೆ.ಕೆ, ಕುಟುಂಬದ ಸದಸ್ಯರಾದ ಡಾ.ಪುರುಷೋತ್ತಮ ಕೆ.ಜಿ, ಪ್ರಮೋದ್ ಕೆ.ಎಚ್, ಡಾ.ಹರ್ಷಿತಾ ಪುರುಷೋತ್ತಮ, ಯತೀಶ್ ಕಟ್ಟೆಮನೆ, ಪ್ರಧಾನ್ ಉಪಸ್ಥಿತರಿದ್ದರು.