ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ ಕು|ದೇವಿಕಾ ಕುರಿಯಾಜೆ

0

ಪ್ರಯತ್ನ ಮೌನವಾಗಿರಬೇಕು, ಯಶಸ್ಸು ಸುದ್ದಿ ಮಾಡಬೇಕು ಎಂಬ ಮಾತಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ವಿಚಾರವೇ ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುತ್ತಿರುವ ಕು| ದೇವಿಕಾ ಕುರಿಯಾಜೆಯವರ ಯಶಸ್ಸು. ಸರಳ, ಸೌಮ್ಯ ಸ್ವಭಾವದ ದೇವಿಕಾ ಶ್ರೀ ಉದಯಶಂಕರ ಕುರಿಯಾಜೆ ಮತ್ತು ಶ್ರೀಮತಿ ವಸಂತಲಕ್ಷ್ಮೀ ದಂಪತಿಯ ದ್ವಿತೀಯ ಸುಪುತ್ರಿ. ಕಳೆದ ಬಾರಿ ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ ಕು|ಹೇಮಸ್ವಾತಿ ಕುರಿಯಾಜೆಯವರ ಸಹೋದರಿ. ಪ್ರಸ್ತುತ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪ್ರಥಮ ಬಿ.ಕಾಂ. ಓದುತ್ತಿರುವ ದೇವಿಕಾರವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರಿನಲ್ಲಿಯೂ ಪ್ರೌಢಶಿಕ್ಷಣವನ್ನು ಕೆಪಿಎಸ್ ಬೆಳ್ಳಾರೆಯಲ್ಲಿಯೂ ಪದವಿಪೂರ್ವ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಉತ್ತಮ ಅಂಕಗಳೊಂದಿಗೆ ಪೂರೈಸಿ ಕಲಿಕೆಯಲ್ಲಿಯೂ ಗುರುತಿಸಿಕೊಂಡವರು. NPEP ಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸುವ ವಿಜ್ಞಾನ ಪಾತ್ರಾಭಿನಯದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿರುವುದು ಇವರ ಸಾಧನೆಯ ಒಂದು ಹೆಗ್ಗುರುತು.
ಮಾತ್ರವಲ್ಲ ಭರತನಾಟ್ಯ ಜ್ಯೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಗಳನ್ನು ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪೂರೈಸಿರುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಮಾರ್ಗದರ್ಶನವನ್ನು ವಿದುಷಿ ಸುಮತಿ ಬೆಳ್ಳಾರೆ, ವಿದುಷಿ ಮಾಲಿನಿ ಪುತ್ತೂರು ಮತ್ತು ವಿದುಷಿ ವೀಣಾ ರಾಘವೇಂದ್ರ ಪುತ್ತೂರು ಇವರುಗಳಿಂದ ಪಡೆದು ಜ್ಯೂನಿಯರ್ ಗ್ರೇಡ್ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿದ್ದಾರೆ. ಯಕ್ಷರಂಗ ಬೆಳ್ಳಾರೆಯ ನಿರ್ದೇಶಕರಾದ ಶ್ರೀ ವಾಸುದೇವ ರೈ ಯವರ ಶಿಷ್ಯೆಯಾಗಿ ಯಕ್ಷಗಾನ ಬಯಲಾಟದ ವೇಷಧಾರಿಯಾಗಿಯೂ ಮಿಂಚಿದವರು. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿಯೂ ತನ್ನದೇ ಆದ ಗುರುತನ್ನು ಮೂಡಿಸಿರುವ ಇವರು ಚೆಂಡೆ ಮತ್ತು ಮದ್ದಳೆ ತರಬೇತಿಯನ್ನು ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಇವರಿಂದ ಪಡೆಯುತ್ತಿದ್ದು ಹಲವು ಯಕ್ಷಗಾನ ಕಾರ್ಯಕ್ರಮಗಳ ಹಿಮ್ಮೇಳದಲ್ಲಿ ಭಾಗವಹಿಸಿದ್ದಾರೆ.
ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುತ್ತಿರುವುದು ಇವರ ಎಲ್ಲಾ ಸಾಧನೆಗಳಿಗೆ ಮುಕುಟದಂತೆ.ರಾಜ್ಯದ ವಿವಿಧ ಕಡೆ ನಡೆದ ಏಳು ಅರ್ಹತಾ ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಮಡಿಕೇರಿ ಬೆಟಾಲಿಯನ್ ನ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಲಿರುವುದು ಹೆಮ್ಮೆಯ ವಿಚಾರ. ಈ ಯಶಸ್ಸಿನ ಹಾದಿ ಸುಲಭವಲ್ಲ. ದೈಹಿಕ ಶ್ರಮವನ್ನು ಮೀರಿ ನಿಲ್ಲುವ ಮನೋಬಲವಿರಬೇಕು. ಈ ಸಾಧನೆಯನ್ನು ಕಳೆದ ಬಾರಿ ಕು| ಹೇಮಸ್ವಾತಿ ಕುರಿಯಾಜೆ ಮತ್ತು ಈ ಬಾರಿ ಕು|ದೇವಿಕಾ ಕುರಿಯಾಜೆಯವರು ಸಾಧಿಸಿ ಹೆತ್ತವರಿಗೆ, ವಿದ್ಯಾಲಯಕ್ಕೆ ಮಾತ್ರವಲ್ಲ ನಮ್ಮ ಊರಿಗೆ ಕೀರ್ತಿ ತಂದಿದ್ದಾರೆ. ಈ ಅಪೂರ್ವ ಸಾಧನೆಗೆ ಬೆನ್ನೆಲುಬಾದ ಅವರ ಹೆತ್ತವರೂ ಅಭಿನಂದನೀಯರು. ಪ್ರೋತ್ಸಾಹ ನೀಡಿದ ವಿದ್ಯಾಲಯಕ್ಕೂ, ಮಾರ್ಗದರ್ಶಕರಾದ NCC ಅಧಿಕಾರಿ ಶ್ರೀ ಅತುಲ್ ಶೆಣೈ ಯವರಿಗೂ ಸಾಧಿಸಿದ ಸಹೋದರಿಯರಿಗೂ ಪ್ರೀತಿಯ ಅಭಿನಂದನೆಗಳು.


…..ಅಶ್ವಿನಿ ಕೋಡಿಬೈಲು
ಅಧ್ಯಕ್ಷರು
ಚುಟುಕು ಸಾಹಿತ್ಯ ಪರಿಷತ್ತು,ಸುಳ್ಯ