ಆಲೆಟ್ಟಿ- ಬಾರ್ಪಣೆ ವಿಕ್ರಮ ಯುವಕ ಮಂಡಲದ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟದ ಉದ್ಘಾಟನೆ- ನಿವೃತ್ತ ಯೋಧರಿಗೆ ಗೌರವಾರ್ಪಣೆ

0

ಗ್ರಾಮೀಣ ಪ್ರದೇಶಗಳಲ್ಲಿನ ಸಂಸ್ಕೃತಿ ಸಂಸ್ಕಾರದ ಉಳಿವು ದೇಶದ ಅಭಿವೃದ್ಧಿಗೆ ಪೂರಕವಾಗಿದೆ -ಶ್ರೀಪತಿ ಭಟ್

ಆಲೆಟ್ಟಿ ಗ್ರಾಮದ ಬಾರ್ಪಣೆ ವಿಕ್ರಮ ಯುವಕ ಮಂಡಲದ ಆಶ್ರಯದಲ್ಲಿ ಮುಕ್ತ ಕೆಸರುಗದ್ದೆ ಕ್ರೀಡಾ ಕೂಟ-2023 ಮತ್ತು ಸಮಾಜದ ಶ್ರೇಷ್ಠ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಜ.1ರಂದು ನಿವೃತ್ತ ಸೈನಿಕ ಕಲ್ಲೆಂಬಿ ಗಂಗಾಧರ ಗೌಡ ರವರ ಗದ್ದೆಯಲ್ಲಿ ಜರುಗಿತು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಲ್ಲೆಂಬಿ ತರವಾಡು ದೈವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಗೌಡ ಕಲ್ಲೆಂಬಿ ಯವರು
ಕ್ರೀಡಾ ಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು, ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಆಲೆಟ್ಟಿ ಪಂಚಾಯತ್ ಸದಸ್ಯ ಸತ್ಯಪ್ರಸಾದ್ ಗಬ್ಬಲ್ಕಜೆ, ನಿವೃತ್ತ ಸೈನಿಕ ಗಂಗಾಧರ ಗೌಡ ಕಲ್ಲೆಂಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭ ಭಾರತೀಯ ಭೂಸೇನೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಿವೃತ್ತ ಯೋಧ ಗಂಗಾಧರ ಗೌಡ ಮತ್ತು ಶ್ರೀಮತಿ ಮಹಾಲಕ್ಷ್ಮಿ ದಂಪತಿ ಯನ್ನು ಯುವಕ ಮಂಡಲದ ವತಿಯಿಂದ
ಸನ್ಮಾನಿಸಿ ಗೌರವಿಸಲಾಯಿತು.
ಯುವಕ ಮಂಡಲದ ಗೌರವ ಸಲಹೆಗಾರ ಅಶ್ವಿನ್ ಅಡ್ಪಂಗಾಯ ಸನ್ಮಾನ ಪತ್ರ ವಾಚಿಸಿದರು.


ಕ್ರೀಡಾಕೂಟದಲ್ಲಿ ಪುರುಷರ
ಮತ್ತು ಮಹಿಳೆಯರ ಮುಕ್ತ ಕೆಸರು ಗದ್ದೆ ಹಗ್ಗ ಜಗ್ಗಾಟ, ಪಿರಮಿಡ್ ರಚಿಸಿ ಮಡಕೆ ಒಡೆಯುವ ಸ್ಪರ್ಧೆ, ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಕಬಡ್ಡಿ ಪಂದ್ಯಾಟ ಮತ್ತು ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ, ರಿಲೇ ಓಟ, ಕೆಸರು ಗದ್ದೆ ಓಟದ ಸ್ಪರ್ಧೆ, 50 ವರ್ಷ ಮೇಲ್ಪಟ್ಟವರಿಗೆ ಕೆಸರು ಗದ್ದೆ ಓಟವನ್ನು ಆಯೋಜಿಸಲಾಗಿತ್ತು.


ಕು.ಪ್ರತೀಕ್ಷಾ, ಕು.ಕೃತಿಕಾ, ಕು.ಪೃಥ್ವಿ, ಕು.ಸಮೃತಾ ಪ್ರಾರ್ಥಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಪ್ರವೀಣ್ ಕಲ್ಲೆಂಬಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಯುವಕ ಮಂಡಲದ ನಿರ್ದೇಶಕ ನಿಶಾಂತ್ ಕೊಯಿಂಗಾಜೆ ವಂದಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.


ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು. ದ.ಕ ಜಿಲ್ಲೆಯ ಮತ್ತು ತಾಲೂಕಿನ ವಿವಿಧ ಕಡೆಗಳಿಂದ ಕ್ರೀಡಾಪಟುಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು.