ಗೃಹ ಸಚಿವರ ಅಡಿಕೆ ವಿಸ್ತರಣೆ ವಿರೋಧಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

0

ಅರಗ ಜ್ಞಾನೇಂದ್ರರು ಅರೆ ಜ್ಞಾನದಿಂದ ಮಾತನಾಡಿದ್ದಾರೆ – ಹೇಳಿಕೆ ಹಿಂಪಡೆಯಬೇಕು

ಬ್ಲಾಕ್ ಕಾಂಗ್ರೆಸ್ ಒತ್ತಾಯ

ಅಡಿಕೆ ಬೆಳೆಗಾರರ ವಿರೋಧಿ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂತೆಗೆದುಕೊಂಡು ವಿಷಾದ ವ್ಯಕ್ತಪಡಿಸಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ಕಿಸಾನ್ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಇಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಲಾಯಿತು.

ರಾಜ್ಯ ಗೃಹ ಸಚಿವ, ಕೇಂದ್ರೀಯ ಅಡಿಕೆ ಸಂರಕ್ಷಣ ಮಂಡಳಿಯ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರರು ಅಡಿಕೆ ಕೃಷಿಯ ವಿಸ್ತರಣೆಗೆ ಬೆಂಬಲ ನೀಡಬಾರದೆಂದು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ನಮ್ಮೆಲ್ಲರನ್ನು ಇವತ್ತು ನಡುಬೀದಿಯಲ್ಲಿ ನಿಲ್ಲಿಸುವಂತಹ ವಾತಾವರಣ ನಿರ್ಮಾಣ ಮಾಡಿದೆ.

ದಕ್ಷಿಣ ಕನ್ನಡದ ಹಲವಾರು ಕಡೆ ಅಡಿಕೆ ಕೃಷಿ ಬೆಳೆದು ಈ ಭಾಗದ ಬಹಳಷ್ಟು ಜನರ ಬದುಕು ಸುಧಾರಿಸಿದೆ. ಜೀವನ ಬಹಳಷ್ಟು ಎತ್ತರಕ್ಕೆ ಹೋಗಿದೆ. ಇಂತಹ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ಆಧಿವೇಶನದಲ್ಲಿ ಅಡಿಕೆ ಬೆಳೆಸುವುದನ್ನು ನಿಲ್ಲಿಸಬೇಕು, ೫ ವರ್ಷದಲ್ಲಿ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಅಡಿಕೆ ಕೃಷಿಯನ್ನು ನಿಲ್ಲಿಸಿ ಇದರೊಂದಿಗೆ ಅಡಿಕೆ ಬೆಳೆಯುವ ರೈತರಿಗೆ ಯಾವುದೇ ಪ್ರೋತ್ಸಾಹ ನೀಡಬಾರದು ಎನ್ನುವ ಮಾತನ್ನು ಹೇಳಿದ್ದಾರೆ. ಬಹುಶಃ ಆ ಒಂದು ಹೇಳಿಕೆಯಿಂದಾಗಿ ಸುಮಾರು ಕೆ.ಜಿ.ಗೆ ೫೫೦ ಇದ್ದ ಅಡಿಕೆ ದರ ಇವತ್ತು ೫೩೦ ಕ್ಕೆ ಬಂದಿದೆ. ೪೯೦ ಕ್ಕೆ ಇದ್ದ ಅಡಿಕೆ ೪೫೦ ಬಂದಿದೆ. ೪೦೦ ಇದ್ದ ಅಡಿಕೆ ೩೫೦ ಕ್ಕೆ ಬಂದಿದೆ.


ಗೃಹ ಸಚಿವರು ಹೇಳಿಕೆ ಕೊಟ್ಟ ಸಂದರ್ಭದಲ್ಲಿ ಈ ಭಾಗದ ಅಡಿಕೆ ಬೆಳೆಗಾರರದಿಂದ ಆರು ಬಾರಿ ಶಾಸಕರು ಆಗಿರುವ ಅಂಗಾರವರು, ಪುತ್ತೂರು ಶಾಶಕ ಸಂಜೀವ ಮಂಠದೂರು, ಬೆಳ್ತಗಂಡಿ ಶಾಸಕ ಹರೀಶ್ ಪೂಂಜರವರು ಇವರ ಮಾತನ್ನು ವಿರೋಧಿಸದೇ ಪರೋಕ್ಷವಾಗಿ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಹೀಗಾಗಿ ಅಡಿಕೆ ಬೆಳೆಗಾರರು ಎಚ್ಚೆತ್ತು ಕೊಂಡಿದ್ದಾರೆ. ಅಡಿಕೆ ಬೆಳೆಗಾರರ ರಕ್ಷಣೆಗೆ ನೀವು ಮುಂದಾಗಬೇಕು, ಇಲ್ಲವಾದಲ್ಲಿ ಇದು ಅಡಿಕೆ ಬೆಳೆಗಾರರ ಶಾಪವಾಗಿ ಪರಿಣಿಮಿಸುತ್ತದೆ. ಹಾಗಾಗಿ ಈ ಹೇಳಿಕೆಯನ್ನು ಗೃಹ ಸಚಿವರು ಹಿಂಪಡೆಯಬೇಕು, ಕೂಡಲೇ ಅಡಿಕೆ ಬೆಳೆಗಾರನಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಹಾಗೂ ಎಲ್ಲಾ ಕೃಷಿಕರು ಬೀದಿಗೆ ಬಂದು ಹೋರಾಟ ಮಾಡುವ ದಿನಗಳು ಬರುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಎಚ್ಚರಿಕೆ ನೀಡಿದರು.
ಅವರು ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಖಂಡಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ಕಿಸಾನ್ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಇಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ನ.ಪಂ.ಸದಸ್ಯ ವೆಂಕಪ್ಪ ಗೌಡ ಮಾತನಾಡಿ “ಹಳದಿ ರೋಗದಿಂದ ಅಡಿಕೆ ಕೃಷಿ ನಾಶವಾಗುತ್ತಿದೆ. ಹಾಗಾಗಿ ನೀವು ಅವರಿಗೆ ಪರಿಹಾರ ನೀಡಬೇಕು. ಅದನ್ನು ಬಿಟ್ಟು ನೀವು ಕ್ಯಾಂಪ್ಕೋದ ಮೂಲಕ ಬೆಂಬಲ ನೀಡುತ್ತೇವೆ ಎನ್ನುವುದು ಅಪರಾಧದ ಹೇಳಿಕೆ. ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಹೇಳಿಕೆ. ಕ್ಯಾಂಪ್ಕೋದಲ್ಲಿ ಅಡಿಕೆಗೆ ರೇಟ್ ಜಾಸ್ತಿ ಇದೆ ಎಂದು ಸೂಚಿಸುತ್ತದೆ, ಆದರೆ ಖಾಸಗಿ ಅಂಗಡಿಯಲ್ಲಿ ರೇಟ್ ಜಾಸ್ತಿ ಇದೆ. ಹೀಗಿರುವಾಗ ಖಾಸಗಿಯವರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆಯನ್ನು ರೈತರಿಂದ ಕೊಂಡುಕೊಳ್ಳಬೇಕಾದ ಕ್ಯಾಂಪ್ಕೋ ಇವತ್ತು ಕಡಿಮೆ ದರ ನೀಡುತ್ತಿದೆ ಎಂದರೆ ಅಡಿಕೆ ಬೆಳೆಗಾರರಿಗೆ ಏನನ್ನು ಸಹಾಯ ಮಾಡಿದ್ದೀರಿ ಎನ್ನುವ ಪ್ರಶ್ನೆ ಈ ಭಾಗದ ಬಿಜೆಪಿ ಶಾಸಕರಿಗೆ ಕೇಳುತ್ತೇನೆ. ಆಮದು ನೀತಿಗೆ ಕಡಿವಾಣ ಹಾಕುವ ಹಾಗೂ ಹೊರ ದೇಶಗಳಿಗೆ ಅಡಿಕೆ ರಫ್ತು ಮಾಡುವ ಮೂಲಕ ಅಡಿಕೆ ಬೆಳೆಗಾರರಿಗೆ ಭವಿಷ್ಯ ಕಲ್ಪಿಸಿಕೊಡಬೇಕಾಗಿದ್ದ ಸರ್ಕಾರವೇ ಈಗ ಅಡಿಕೆಗೆ ಭವಿಷ್ಯವಿಲ್ಲ ಎಂದು ಹೇಳಿರುವುದು ಖಂಡನೀಯ ಎಂದರು.

ಜಿಲ್ಲಾ ಕಿಸಾಸ್ ಕಾಂಗ್ರೆಸ್ ಘಟಕ ಅಧ್ಯಕ್ಷ ಮೋಹನ್ ಗೌಡ ಮಾತನಾಡಿ ” ಆರಗ ಜ್ಞಾನೇಂದ್ರರವರು ಹೇಳಿದ ಹೇಳಿಕೆ ಖಂಡನೀಯ. ಆರಗರವರ ಹೇಳಿಕೆ ಅರಗಿಸಿಕೊಳ್ಳಲು ಆಗದ ಸ್ಥಿತಿಯಾಗಿದೆ. ನೀವು ಸಾಧ್ಯವಾದರೇ ಹೊರ ದೇಶದಿಂದ ಅಡಿಕೆ ಆಮದು ಮಾಡುವುದಕ್ಕೆ ಕಡಿವಾಣ ಹಾಕಿ, ಒಂದು ವೇಳೆ ಕಾಂಗ್ರೆಸ್ ನಾಯಕ ಈ ರೀತಿಯ ಹೇಳಿಕೆ ನೀಡಿದ್ದರೆ ಹೇಳಿಕೆ ನೀಡಿ ೨೪ ಗಂಟೆಯೊಳಗೆ ವಜಾ ಮಾಡುತ್ತಿದ್ದರು. ಆದರೆ ಬಿಜೆಪಿಯವರು ಈ ರೀತಿಯ ಹೇಳಿಕೆಯನ್ನು ಅರಗಿಸಿಕೊಳ್ಳುವ ಮನಸ್ಥಿತಿ ಇದೆ. ಹೀಗಾಗಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ರೈತರ ರಕ್ಷಣೆ ಇವರಿಗೆ ಇಲ್ಲ ಎಂದರು.

ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ, ಕೆಪಿಸಿಸಿ ಸದಸ್ಯ ಟಿ.ಎಂ.ಶಹೀದ್ ಮಾತನಾಡಿದರು.

ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ರಾಜೀವಿ ಆರ್.ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರು, ಬ್ಲಾಕ್ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಧರ್ಮಪಾಲ ಕೊಯಿಂಗಾಜೆ, ಶಾಫಿ ಕುತ್ತಮೊಟ್ಟೆ, ಆನಂದ ಬೆಳ್ಳಾರೆ, ಬೆಳ್ಳಿಯಪ್ಪ ಗೌಡ ಮಡ್ತಿಲ, ಸಿದ್ಧೀಕ್ ಕೊಕ್ಕೋ, ಅನಿಲ್ ಬಳ್ಳಡ್ಕ, ಪಿ.ಎ.ಮಹಮ್ಮದ್ , ಬಾಲಚಂದ್ರ ಉಬರಡ್ಕ, ಪರಮೇಶ್ವರ ಕೆಂಬಾರೆ, ತಿರುಮಲೇಶ್ವರಿ ಜಾಲ್ಸೂರು, ಹಮೀದ್ ಕುತ್ತಮೊಟ್ಟೆ, ಪ್ರದೀಪ್ ಕುಮಾರ್ ರೈ ಪಾಂಬಾರು, ದಿನೇಶ್ ಅಂಬೆಕಲ್ಲು, ಸತ್ಯಕುಮಾರ್ ಅಂಡಿಜೆ, ಕೇಶವ ಹಸಿಯಡ್ಕ, ಕರುಣಾಕರ ಮಡ್ತಿಲ, ಡೇವಿಡ್ ಧೀರಾ ಕ್ರಾಸ್ತಾ, ಸದಾನಂದ ಮಾವಂಜಿ, ಇಸ್ಮಾಯಿಲ್ ಪಡ್ಪಿನಂಗಡಿ, ಎಂ.ಸಂಶುದ್ಧೀನ್, ಸುಜಯಕೃಷ್ಣ, ಲೀಲಾ ಮನಮೋಹನ್, ಶ್ರೀಹರಿ ಕುಕ್ಕುಡೇಲು, ಶಿವರಾಮ್ ಎಮ್.ಎಚ್, ಶರೀಫ್ ಕಂಠಿ, ಬಾಲಕೃಷ್ಣ ಭಟ್, ಸನತ್ ಮುಳುಗಾಡು, ಗೋಕುಲ್‌ದಾಸ್, ವೆಂಕಟ್ರಮಣ ಇಟ್ಟಿಗುಂಡಿ, ದಿನೇಶ್ ಅಂಬೆಕಲ್ಲು, ರಾಧಾಕೃಷ್ಣ ಪರಿವಾರಕಾನ, ಕೀರ್ತನ್ ಕೊಡಪಾಲ, ಪವಾಝ್, ಗಂಗಾಧರ ಮೇನಾಲ, ಪುಷ್ಪಾವತಿ ಪೂಂಬಾಡಿ, ಶಶಿಧರ ಎಂ.ಜೆ, ಜಯಂತಿ ಕೂಟೇಲು, ಮೀನಾಕ್ಷಿ ಕುಡೆಕಲ್ಲು, ಭವಾನಿಶಂಕರ ಕಲ್ಮಡ್ಕ, ಅನಿಲ್ ರೈ, ವಿಜಯ ಮಡ್ತಿಲ, ಸುನೀಲ್ ರೈ, ಅನಿಲ್ ರೈ, ಶಶಿಧರ ಎಂ.ಜೆ. ಮೊದಲಾದವರು ಉಪಸ್ಥಿತರಿದ್ದರು.