ಕುಕ್ಕುಜಡ್ಕ: ವಿಷ್ಣುನಗರದ ವಿಷ್ಣುಮೂರ್ತಿ ರಕ್ತೇಶ್ವರೀ ಮತ್ತು ಪರಿವಾರ ದೈವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂಪನ್ನ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರದಲ್ಲಿರುವ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ 69 ನೇ ವರ್ಷದ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಜ.2 ರಿಂದ 4 ರ ತನಕ ವಿಜ್ರಂಭಣೆಯಿಂದ ಜರುಗಿತು.


ಜ.2 ರಂದು ಬೆಳಗ್ಗೆ ಹಸಿರುವಾಣಿ ಸಮರ್ಪಣೆಯಾಗಿ ಬ್ರಹ್ಮಶ್ರೀ ವೇ. ಮೂ. ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಪುರೋಹಿತ ರಾಧಾಕೃಷ್ಣ ಜೋಗಿಯಡ್ಕ ರವರ ನೇತೃತ್ವದಲ್ಲಿ ಗಣಹೋಮ ಮತ್ತು ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆಯಿತು.


ಬಳಿಕ ಶ್ರೀ ರಾಮ ಭಜನಾ ಮಂದಿರ ಕಲ್ಮಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆದು ‌ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.


ಅಪರಾಹ್ನ ಶ್ರೀ ರಕ್ತೇಶ್ವರೀ ಪರಿವಾರ ದೈವಗಳ ಭಂಡಾರ ಇಳಿಯುವ ಕಾರ್ಯಕ್ರಮವಾಗಿ ಸಂಜೆ ಶ್ರೀ ರಕ್ತೇಶ್ವರೀ ಮತ್ತು ‌ಪರಿವಾರ ದೈವಗಳಾದ ಶ್ರೀ ಧರ್ಮಸ್ಥಳ ಪಂಜುರ್ಲಿ, ಜಾವತೆ, ಮಂತ್ರವಾದಿ ಗುಳಿಗ, ರಕ್ತೇಶ್ವರೀ ಗುಳಿಗ, ಕಲ್ಕುಡ ಕಲ್ಲುರ್ಟಿ ಮತ್ತು ಅಂಗಾರ ಬಾಕುಡ ದೈವಗಳ ನರ್ತನ ಸೇವೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.


ಜ.3 ರಂದು ಪ್ರಾತ:ಕಾಲದಲ್ಲಿ ಭಾರತೀಯ ತೀಯ ಸಮಾಜ ಬಾಂಧವರು ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಕುಂಡ ಜೋಡಣೆಯ ಕಾರ್ಯ ನೆರವೇರಿಸಿದರು. ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮರಕತ ಸದಸ್ಯರಿಂದ ಭಜನಾ ಕಾರ್ಯಕ್ರಮ , ಬಳಿಕ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಇಳಿದು ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶವಾಯಿತು. ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕುಕ್ಕುಜಡ್ಕ ಮತ್ತು ಸಮರ್ಪಣಾ ಭಜನಾ ತಂಡ ಕುಕ್ಕುಜಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಆಗಮಿಸಿದ ಎಲ್ಲರಿಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.ರಾತ್ರಿ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿಭಾನ್ವಿತ ಕಲಾವಿದರ ಕೂಡುವಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಜರುಗಿತು. ನಂತರ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಅತ್ಯಂತ ವಿಜ್ರಂಭಣೆಯಿಂದ ಜರುಗಿತು. ಬಳಿಕ ಮಂಗಳಾ ಕಲಾವಿದೆರ್ ಕುಡ್ಲ ಅಭಿನಯದ ಸಾಮಾಜಿಕ ತುಳು ಹಾಸ್ಯಮಯ ನಾಟಕ ಕಟ್ಟೆದ ಗುಳಿಗೆ ಕೈ ಬುಡಾಯೆ ಪ್ರದರ್ಶನಗೊಂಡಿತು. ಮರುದಿನ ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಸೇವೆಯು ನಡೆಯಿತು. ದೈವದ ಬಾರಣೆಯಾಗಿ ಯಂ.ಪಿ.ಜಿ.ಕೆ ಯವರ ಅಶ್ವಥ್ಥ ವೃಕ್ಷ ಪೂಜೆ ನಡೆದು ಮಾಯ್ಪಡ್ಕ ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕ್ಷೀರ ಸೇವನೆಯಾಗಿ‌ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ನಂತರ ಶ್ರೀ ದೈವದ ಮಾರಿಕಳ ಪ್ರವೇಶವಾಯಿತು.
ದೈವಸ್ಥಾನದ ಆಡಳಿತ ಸಮಿತಿ ವ್ಯವಸ್ಥಾಪಕ ಹಿರಿಯರಾದ ಯಂ.ಜಿ.ಸತ್ಯನಾರಾಯಣ, ಆಡಳಿತ ವರ್ಗದ ಸದಸ್ಯರಾದ ಶ್ರೀಮತಿ ಯಂ.ಎಸ್.ಲತೇಶ್ವರೀ, ಯಂ.ಎಸ್.ಶ್ರೀಶ ಕುಮಾರ್, ಯಂ.ಎಸ್.ಹರ್ಷ ಕುಮಾರ್, ಪ್ರಕಾಶ್ ಯಂ.ಯಸ್, ಯಂ.ಬಿ.ರವಿಕುಮಾರ್, ಯಂ.ಬಿ.ಶಶಿಕುಮಾರ್, ಯಂ.ಬಿ.ಶಿವಕುಮಾರ್, ರಾಮಕೃಷ್ಣ ಕಂಜರ್ಪಣೆ ಸರ್ವರನ್ನೂ ಸ್ವಾಗತಿಸಿದರು.ಉತ್ಸವದ ಸಂದರ್ಭದಲ್ಲಿ ಭಾರತೀಯ ತೀಯ ಸಮಾಜ ಬಾಂಧವರು ದೈವದ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಿದರು.
ಅನ್ನ ಸಂತರ್ಪಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಉತ್ಸವದ ಉಪ ಸಮಿತಿ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.
ಒತ್ತೆಕೋಲ ದಂದು ಊರ ಹಾಗೂ ಪರ ಊರಿನ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ದೈವಸ್ಥಾನದ ಪರಿಸರವನ್ನು ತಳಿರು ತೋರಣ ವಿದ್ಯುದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಶಿಸ್ತು ಬದ್ದವಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು.