ಆಮ್ ಆದ್ಮಿ ಪಕ್ಷ ರಾಜ್ಯದ 224 ಕ್ಷೇತ್ರದಲ್ಲಿ ಸ್ಪರ್ಧೆ : ಅಶೋಕ್ ಎಡಮಲೆ

0

ಜಿಲ್ಲೆಯಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟಿಸಲಾಗಿದೆ : ಸಂತೋಷ್ ಕಾಮತ್

ಆಮ್ ಆದ್ಮಿ ಪಕ್ಷದ ಸಂಭ್ರಮಾಚರಣೆ ಮತ್ತು ಕಾರ್ಯಕರ್ತರ ಸಭೆ

” ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಆಮ್‌ ಆದ್ಮಿ ಪಕ್ಷ ಸ್ಪರ್ಧೆ ನಡೆಸಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿದೆ ” ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ ಹೇಳಿದ್ದಾರೆ.


ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಜ.8 ರಂದು ಆಮ್ ಆದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಸುಳ್ಯದ ವರ್ತಕರ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

” ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಮಾತ್ರ ಬಿಜೆಪಿಗೆ ಅಭಿವೃದ್ಧಿಯ ಮತ್ತು ಶಂಕುಸ್ಥಾಪನೆಯ ನೆನಪಾಗುತ್ತದೆ. ಇದುವರೆಗೆ ಇಲ್ಲದ ಅಭಿವೃದ್ಧಿಯ ಮತ್ತು ಶಂಕುಸ್ಥಾಪನೆಯ ಫ್ಲೆಕ್ಸ್‌ಗಳು ಈಗ ಕಂಡು ಬರುತ್ತಿದೆ ” ಎಂದು ಅವರು ಹೇಳಿದರು.

ಕೇಕ್ ಕತ್ತರಿಸಿ‌ ಸಂಭ್ರಮಾಚರಣೆಗೆ ಚಾಲನೆ ನೀಡಿದ ಆಪ್‌ ದ.ಕ.ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಮಾತನಾಡಿ ” ದ.ಕ.ಜಿಲ್ಲೆಯಲ್ಲಿ ಪಕ್ಷ ಸಂಘಟನೆ ತಳ ಮಟ್ಟದಲ್ಲಿ ಆಗಿದೆ. ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಪ್ರಬಲ ಪಕ್ಷವಾಗಿ ಹೊರ ಬರಲಿದೆ ” ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡರಾದ ಪ್ರಸನ್ನ ಎಣ್ಮೂರು ಮಾತನಾಡಿ ” ಬಿಜೆಪಿ ಅಧಿಕಾರಕ್ಕೆ ಬಂದಾಗ ದೊಡ್ಡ ನಿರೀಕ್ಷೆ ಇತ್ತು. ಬಿಜೆಪಿ ಜನಪ್ರತಿನಿಧಿಗಳು ಗೆದ್ದಾಗ ಜನರು ಗೆಲ್ಲುತ್ತೇವೆ ಎಂದು ಭಾವಿಸಿದ್ದೆವು. ಆದರೆ ನಿರೀಕ್ಷೆ ಹುಸಿಯಾದವು. ಜನಪ್ರತಿನಿಧಿಗಳು ಗೆದ್ದರೇ ಹೊರತು ಜನರು ಗೆಲ್ಲಲಿಲ್ಲ ” ಎಂದರಲ್ಲದೆ, ” ಭ್ರಷ್ಟಾಚಾರ ಮುಕ್ತ ಆಡಳಿತ ಮಾಡುವ ಮೂಲಕ ಆಮ್ ಆದ್ಮಿ ಪಾರ್ಟಿ ಜನರ ನಿರೀಕ್ಷೆಯನ್ನು ಉಳಿಸಿದೆ. ಗ್ರಾಮಾಂತರ ಭಾಗದಲ್ಲಿ ಶೇ.60 ರಷ್ಟು ನಿಶ್ಯಬ್ದ ಮತದಾರರಿದ್ದಾರೆ. ಅವರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲಿದ್ದಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಆಮ್ ಆದ್ಮಿ ಪಕ್ಷದ ಸುಳ್ಯ ಕ್ಷೇತ್ರದ ಸೇವಾಕಾಂಕ್ಷಿ ಶ್ರೀಮತಿ ಸುಮನಾ ಬೆಳ್ಳಾರ್ಕರ್ ಮಾತನಾಡಿ ” ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡು ಸಕ್ರೀಯಳಾಗಿದ್ದೇನೆ. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆ ಅನನ್ಯವಾಗಿದೆ. ಸುಳ್ಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೇವಾಕಾಂಕ್ಷಿಯಾಗಿದ್ದೇನೆ. ಜನ ಸಂಪರ್ಕ ಆರಂಭಿಸಲಾಗಿದ್ದು ಜನರಿಂದ ಉತ್ತಮ ಸ್ಪಂದನ ಸಿಕ್ಕಿದೆ ” ಎಂದು ಹೇಳಿದರು.
ಆಪ್ ದ.ಕ.ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ, ಪುತ್ತೂರು ಕ್ಷೇತ್ರದ ಸೇವಾಕಾಂಕ್ಷಿ ವಿಶುಕುಮಾರ್, ಮುಖಂಡರಾದ ನವೀನ್‌ಚಂದ್ರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಸಂಪರ್ಕ ಅಭಿಯಾನದ ಸಂಚಾಲಕ ಗಣೇಶ್ ಪ್ರಸಾದ್ ಸ್ವಾಗತಿಸಿದರು. ಖಲಂದರ್‌ ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.