ಮಡಪ್ಪಾಡಿ ಶಾಲೆಯ ಹಳೆ ಕಟ್ಟಡಕ್ಕೆ ಮರುಜೀವ
ಪೋಷಕರೇ ಹಣ ಸಂಗ್ರಹಿಸಿ ದುರಸ್ಥಿ ಕಾರ್‍ಯ

0

ಮಡಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1951 ನೇ ಇಸವಿಯಲ್ಲಿ ಪ್ರಾರಂಭವಾಗಿ ರಜತಮಹೋತ್ಸವಕ್ಕೆ ಹತ್ತಿರದಲ್ಲಿದು, ಶಾಲೆ ಪ್ರಾರಂಭವಾದಾಗ ಕಟ್ಟಿದ ಕಟ್ಟಡವು ಕೆಡವಿ ಹಾಕುವ ಹಂತದಲ್ಲಿದ್ದು ಪ್ರಯೋಜನಕ್ಕೆ ಬಾರದ 3 ಕೊಠಡಿಗಳನ್ನು ಎಸ್‌ಡಿಎಂಸಿ ಮತ್ತು ಪೋಷಕರು ಸೇರಿ ಹಾಳಾಗಿದ್ದ ರೀಪುಗಳನ್ನು ತೆಗೆದು ಹೊಸದಾಗಿ ಕಬ್ಬಿಣದ ರಾಡುಗಳನ್ನು ಜೋಡಿಸಿ ಹಂಚುಗಳನ್ನು ಹೊದಿಸಿ ಮೊದಲಿನಂತೆ ಮಾಡಿದ್ದಾರೆ.


ಕೆಡವಿ ಹಾಕಿದರೆ ಕೊಠಡಿಗಳ ಕೊರತೆ ಉಂಟಾಗಿ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತುಗಳ ಸಂಗ್ರಹಾಲಯಕ್ಕೆ ಜಾಗ ಇಲ್ಲದಿರುವುದರಿಂದ ಹಾಗೂ ಗೋಡೆ ಗಟ್ಟಿ ಇರುವುದರಿಂದ ಎಸ್‌ಡಿಎಂಸಿ ಸಭೆಯಲ್ಲಿ ನಿರ್ಣಯಿಸಿ ಗೆದ್ದಲು ಹಿಡಿದು ಹಾಳಾಗಿದ್ದ ರೀಪುಗಳನ್ನು ತೆಗೆದು ಹಾಕಿ, ರೀಪು ಹಾಕಿ ಹಂಚು ಹೊದಿಸಲು ತೀರ್ಮಾನಿಸಲಾಯಿತು. ಆದರೆ ಎಲ್ಲಾ ರೀಪುಗಳು ಸಂಪೂರ್ಣ ಹಾಳಾಗಿದ್ದರಿಂದ ಎಸ್‌ಡಿಎಂಸಿ ಮತ್ತು ಪೋಷಕರು ಸೇರಿ ಸುಮಾರು 20,000 ಮೊತ್ತದ ಹಣ ಸಂಗ್ರಹಿಸಿ ಕಬ್ಬಿಣದ ರಾಡುಗಳನ್ನು ತಂದು ಹಂಚುಗಳನ್ನು ಸ್ವಚ್ಛಗೊಳಿಸಿ ಹೊದಿಸಿದರು.


ಹಿಂದೆ ಮಳೆ ಬಂದಾಗ ಸೋರುತ್ತಿದ್ದ ಕೊಠಡಿಗಳು ಈಗ ಸೋರುವುದಿಲ್ಲ. ಅಲ್ಲದೇ ವರಾಂಡದ ಮಾಡನ್ನು ಕೂಡಾ ಎತ್ತರ ಮಾಡಿದ್ದಾರೆ. ಈಗ ಒಂದು ಕೊಠಡಿಯಲ್ಲಿ ಗ್ರಂಥಾಲಯವನ್ನು ಹಾಗೂ ಇನ್ನೊಂದು ಕೊಠಡಿಯಲ್ಲಿ ಹಳೇ ವಸ್ತುಗಳ ವಸ್ತು ಸಂಗ್ರಹಾಲಯವನ್ನು ಮಾಡಲು ತೀರ್ಮಾನಿಸಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರವು ಕೊಠಡಿಗಳನ್ನು ನೀಡದಿರುವ ಈ ಕಾಲದಲ್ಲಿ ಪೋಷಕರೇ ತಮ್ಮ ಸ್ವಂತ ಹಣದಿಂದ ಈ ಕಾರ್‍ಯ ಮಾಡಿರುವುದು ಶ್ಲಾಘನೀಯ ವಿಷಯವಾಗಿದೆ. ಅಲ್ಲದೇ ಎಲ್ಲಾ ಪೋಷಕರು ತಮ್ಮ ಕೆಲಸದ ಒತ್ತಡದ ನಡುವೆಯೂ ತಾವೇ ಬಂದು ೩-೪ ದಿನ ಕೆಲಸ ಮಾಡಿ ರಿಪೇರಿ ಮಾಡಿದ್ದು ಎಲ್ಲರೂ ಮೆಚ್ಚುವಂತ ಕಾರ್‍ಯವಾಗಿದೆ.


ಈ ಹಿಂದೆ ಕೂಡ ಶಾಲೆಗೆ ಯುವಕ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರು ಬಿಎಸ್‌ಎನ್‌ಎಲ್ ಬ್ರೋಡ್ ಬ್ಯಾಂಡ್ ವೈಫೈ ನೀಡಿ ನೆಟ್ವರ್ಕ್ ಸಮಸ್ಯೆ ಪರಿಹರಿಸಿದ್ದರು. ಎಸ್‌ಡಿಎಂಸಿ ಮತ್ತು ಪೋಷಕರು ಅಕ್ಷರ ದಾಸೋಹಕ್ಕೆ 10 ಲೀಟರ್ ಕುಕ್ಕರ್ ನೀಡಿ ಸಹಕರಿಸಿದ್ದಾರೆ, ಹಾಗೆಯೇ ಶಿಕ್ಷಕರ ಕೊರತೆ ನೀಗಿಸಲು ಒಬ್ಬರು ಗೌರವ ಶಿಕ್ಷಕರನ್ನು ನೀಡಿದ್ದಾರೆ. ಗೌರವ ಶಿಕ್ಷಕರಿಗೆ ಪೋಷಕರೇ ಪ್ರತಿ ತಿಂಗಳು ಹಣ ನೀಡುತ್ತಾ ಬಂದಿದ್ದಾರೆ.


ಈ ಕಾರ್‍ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕ ವೃಂದ, ಪೋಷಕರು, ಹಳೇ ವಿದ್ಯಾರ್ಥಿ ಸಂಘದ ಸದಸ್ಯರು, ಯುವಕ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರು, ಅಂಗನವಾಡಿಯ ಪೋಷಕರು ತಮ್ಮ ನಿರಂತರ ಪರಶ್ರಮದಿಂದ ಬೀಳುವ ಹಂತದಲ್ಲಿದ್ದ ಕಟ್ಟಡಕ್ಕೆ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದು, ಎಸ್‌ಡಿಎಂಸಿ ಹಾಗೂ ಪೋಷಕರು ಶಾಲೆಯ ನಿರಂತರ ಬೆಳವಣಿಗೆಗೆ ಕಾರಣವಾಗಿರುವುದು ಶ್ಲಾಘನೀಯ ವಿಷಯವಾಗಿದೆ.