ಕೊಡಿಯಾಲ ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ದೈವಗಳ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಉತ್ತಮ ಸಂಸ್ಕಾರ,ಸಂಸ್ಕೃತಿಯಿಂದ ಧರ್ಮ ಜಾಗೃತಿ : ಸತ್ಯನಾರಾಯಣ ಕಾರಂತ

“ಹಿಂದೂ ಧರ್ಮ ಶ್ರೇಷ್ಟ ಧರ್ಮ.ಧರ್ಮವನ್ನು ಉಳಿಸುವ ಕೆಲಸ ಆಗಬೇಕು.ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ,ಧಾರ್ಮಿಕತೆಯ ಬಗ್ಗೆ ಅರಿವು ಮೂಡಿಸಬೇಕು.ನಮ್ಮ ಧರ್ಮದಲ್ಲಿ ಜ್ಞಾನ ಸಂಪಾದನೆಗೆ ಬಹಳಷ್ಟು ಅವಕಾಶವಿದೆ.ಒಳ್ಳೆಯ ವಿಚಾರವನ್ನು ಆಚರಣೆ ಮಾಡಬೇಕು.ದಿನ ನಿತ್ಯ ಮನೆಯಲ್ಲಿ ಭಜನೆ ಮಾಡಬೇಕು.ಧಾರ್ಮಿಕ ಆಚರಣೆ,ಉತ್ತಮ ಸಂಸ್ಕಾರ ,ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸುವ ಮುಖಾಂತರ ಧರ್ಮ ಜಾಗೃತಿಯಾಗಬೇಕು” ಎಂದು ಆಲಂಕಾರಿನ ಧಾರ್ಮಿಕ ಪ್ರವಚನಕಾರರಾದ ವೇದಮೂರ್ತಿ ಸತ್ಯನಾರಾಯಣ ಕಾರಂತರು ಹೇಳಿದರು.


ಅವರು ಕೊಡಿಯಾಲ ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಜ.15 ರಂದು ನಡೆದ ದೈವಗಳ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.


ಭಾರತ ದೇಶ ದೇವರ ಕೋಣೆ ಇದ್ದ ಹಾಗೆ ಭಾರತದಲ್ಲಿ ವಿಶೇಷತೆ ಇದೆ.ಧರ್ಮ ಪ್ರಜ್ಞೆಯ ಮೂಲಕ ಜೀವನ ನಡೆಯಬೇಕು.ದೇವರ ಅನುಗ್ರಹದಿಂದ ಎಲ್ಲವೂ ಸಾಧ್ಯ ಎಂದು ಅವರು ಹೇಳಿದರು.


ದೈವಸ್ಥಾನಕ್ಕೆ ಮರ ಒದಗಿಸಿದ ಪಂಜದ ಬೇರ್ಯ ತಿಮ್ಮಪ್ಪ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಸಂತೋಷ್ ರೈ.ಕೆ, ಯತೀಶ್ ಆರ್ವಾರ ರವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ದೈವಸ್ಥಾನಕ್ಕೆ ಸಹಕಾರ ನೀಡಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾಣಿಯೂರು ಮಠದ ನಿರಂಜನ ಆಚಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಕೆ.ಪಿ.ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಪಿ, ಕಲ್ಪಡ ಮಾಲ್ಯತ್ತಾರು ರಾಮಚಂದ್ರ ಉಪಾಧ್ಯಾಯ,ದೈವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ ಉಪಾಧ್ಯಾಯ,ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಕಲ್ಪಡ ಸ್ವಾಗತಿಸಿ,ಪೂರ್ಣಿಮಾ ,ಆಶಿಕಾ ಪ್ರಾರ್ಥಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ.ಪ್ರಾಸ್ತಾವಿಕ ಮಾತನಾಡಿದರು.ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

ಜ.14 ರಂದು ಸಂಜೆ ಗಂಟೆ 6.30 ಕ್ಕೆ ದೇವತಾಪ್ರಾರ್ಥನೆ,ಆಚಾರ್ಯವರಣ,ಸ್ವಸ್ತಿ ಪುಣ್ಯಾಹವಾಚನ,ಸ್ಥಳಶುದ್ಧಿ,ಪ್ರಾಸಾದ ಶುದ್ಧಿ,ರಕ್ಷೋಘ್ನ ಹೋಮ,ವಾಸ್ತುಹೋಮ, ವಾಸ್ತುಬಲಿ,ಪ್ರಾಕಾರ ಬಲಿ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.
ಸಂಜೆ ಗಂಟೆ 7.00 ರಿಂದ ಸಾಕ್ಷಾತ್ ಶಿವ ಭಜನಾ ತಂಡ ಚಾರ್ವಾಕ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ನಾವೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಜ.15 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ,ಗಂಟೆ 9.14 ರಿಂದ 9.15 ರ ಕುಂಭಲಗ್ನ ಶುಭಮುಹೂರ್ತದಲ್ಲಿ ಶ್ರೀ ಉಳ್ಳಾಕುಲು,ಶ್ರೀ ಚಾಮುಂಡಿ ಹಾಗೂ ಪರಿವಾರ ದೈವಗಳ ಪುನ:ಪ್ರತಿಷ್ಠೆ,ಕಲಶಾಭಿಷೇಕ,ತಂಬಿಲ ಸೇವೆ,ಮಂಗಳಾರತಿ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಗಂಟೆ ,7.00 ಕ್ಕೆ ಭಂಡಾರ ತೆಗೆಯಲಾಗುವುದು.
ಪ್ರಾತ:ಕಾಲ ಗಂಟೆ 5.00 ಕ್ಕೆ ಶ್ರೀ ಉಳ್ಳಾಕುಲು ದೈವದ ನೇಮ,ಬೆಳಿಗ್ಗೆ ಗಂಟೆ 9.00 ರಿಂದ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಮಧ್ಯಾಹ್ನ ಗಂಟೆ 12.30 ಕ್ಕೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.