ತಶ್ವಿತ್‌ನ ಚಿಕಿತ್ಸೆಗೆ ನೆರವಾಗಿ ಸಹಕರಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಗ್ರೂಪ್

0

ಸುಳ್ಯದ ಅಂಬಟೆಡ್ಕದಲ್ಲಿ ವಾಸವಾಗಿರುವ ಗಣೇಶ್ ಮತ್ತು ಜ್ಯೋತಿ ದಂಪತಿಗಳ ಪುತ್ರ ೧೧ ವರ್ಷದ ತಶ್ವಿತ್ ಎಂಬ ಬಾಲಕ ಲಿಂಪೋಮ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಆ ಮಗುವಿನ ಚಿಕಿತ್ಸೆಗಾಗಿ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಡಿಯೋ ಮೂಲಕ ವಿನಂತಿಸಿ ಕೊಂಡಾಗ ಸುಳ್ಯ ನಗರವಲ್ಲದೆ ಜಿಲ್ಲೆ ಮತ್ತು ಹೊರ ಜಿಲ್ಲೆ, ರಾಜ್ಯ ಹೊರ ರಾಜ್ಯಗಳಿಂದ, ಅಲ್ಲದೆ ವಿದೇಶಗಳಿಂದಲೂ ಸಾವಿರಾರು ಸಹೃದಯ ಬಾಂಧವರು ಸ್ಪಂದನೆ ನೀಡುವ ಮೂಲಕ ಕೇವಲ ಎರಡೇ ದಿನಗಳಲ್ಲಿ ೪೬ ಲಕ್ಷದ ೩೩ ಸಾವಿರದ ೯೬೦ ರೂಪಾಯಿಗಳನ್ನು ಬಾಲಕನ ಪೋಷಕರ ಬ್ಯಾಂಕ್ ಖಾತೆಗೆ ನೀಡುವ ಮೂಲಕ ಚಿಕಿತ್ಸೆಗೆ ಸ್ಪಂದನೆ ನೀಡಿರುವಂತದ್ದು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದ್ದೇವೆ ಎಂದು ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಟ್ರಸ್ಟಿನ ಅಧ್ಯಕ್ಷ ಶಹಝಹಾನ್ ನಿಲಂಬೂರು ತಿಳಿಸಿದ್ದಾರೆ.


ಜನತೆಯ ಈ ರೀತಿಯ ಸ್ಪಂದನೆಯು ಇಂದು ಒಂದು ಬಾಲಕನ ಜೀವ ರಕ್ಷಣೆಗೆ ಸಾಕ್ಷಿಯಾಗಿದೆ. ಇದಕ್ಕೂ ಮೊದಲು ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಈ ರೀತಿಯ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ರೋಗಿಗಳ ನೆರವಿಗಾಗಿ ಟ್ರಸ್ಟ್ ವತಿಯಿಂದ ವಿಡಿಯೋ ಮಾಡಿ ಪ್ರಸಾರ ಪಡಿಸಿದಾಗ ಜನತೆಯ ಸ್ಪಂದನೆ ಅತ್ಯಂತ ಉತ್ತಮ ರೀತಿಯಲ್ಲಿ ಲಭಿಸಿರುತ್ತದೆ. ಇದರಿಂದಾಗಿ ಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗಲು ನಮ್ಮಿಂದ ಸಾಧ್ಯವಾಗುತ್ತಿದೆ. ಸಹಕರಿಸಿದ ಎಲ್ಲಾ ಬಾಂಧವರನ್ನು ಹೃದಯಾಳದಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.


ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಸ್ಟಿನ ಕರ್ನಾಟಕ ಕೋರ್ಡಿನೇಟರ್ ಜಾಬೀರ್ ನಿಜಾಮಿ ಮಾತನಾಡಿ, ಈ ಬೃಹತ್ ಮೊತ್ತದ ಸಂಗ್ರಹಕ್ಕೆ ಸುಳ್ಯದ ಸರ್ವ ಜನತೆಯ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ. ಜಾತಿ ಮತ ಧರ್ಮ ಎಲ್ಲವನ್ನು ಮೀರಿ ಸುಳ್ಯದ ಜನತೆ ನೀಡಿದ ಸ್ಪಂದನೆ ಇಂದು ಆ ಮಗುವಿನ ಚಿಕಿತ್ಸೆಯ ಬೃಹತ್ ಮೊತ್ತವನ್ನು ಸಂಗ್ರಹಿಸಲು ದಾರಿಯಾಗಿದೆ.


ಟ್ರಸ್ಟಿನ ಮೂಲಕ ಕೇವಲ ಅನಾರೋಗ್ಯ ಪೀಡಿತರಿಗೆ ಮಾತ್ರ ಸಹಾಯ ಹಸ್ತವನ್ನು ನೀಡದೆ, ಸಮಾಜದಲ್ಲಿ ಶೈಕ್ಷಣಿಕವಾಗಿ ಬೆಳೆಯಲು ಮನಸ್ಸು ತೋರುವ ಬಡ ವಿದ್ಯಾರ್ಥಿಗಳಿಗೂ ನಮ್ಮ ಟ್ರಸ್ಟ್ ಮೂಲಕ ಸ್ಪಂದನೆಯನ್ನು ನೀಡಲಾಗಿದೆ.


ಮುಂದಿನ ದಿನಗಳಲ್ಲಿ ಟ್ರಸ್ಟಿನ ಮೂಲಕ ಸರ್ವಧರ್ಮಿಯ ಬಡ ಹೆಣ್ಣು ಮಕ್ಕಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವ ಯೋಜನೆಯನ್ನು ರೂಪಿಸಲಾಗಿದೆ. ಈ ರೀತಿಯಾಗಿ ಸಮಾಜದಲ್ಲಿ ಪ್ರತಿಯೊಂದು ಧರ್ಮದವರಿಗೂ ಕಷ್ಟದಲ್ಲಿರುವ, ನೋವಿನಲ್ಲಿರುವ ಕುಟುಂಬಕ್ಕೆ ಟ್ರಸ್ಟ್ ವತಿಯಿಂದ ಆಸರೆಯಾಗುವುದೇ ನಮ್ಮ ಗುರಿಯಾಗಿದೆ.


ಸುಳ್ಯದಲ್ಲಿ ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಒಂದು ತಂಡ ಈಗಾಗಲೇ ನಮ್ಮ ಟ್ರಸ್ಟಿನ ಮೂಲಕ ಕಾರ್ಯಪ್ರವೃತ್ತರಾಗಿದ್ದು ಇದರಿಂದ ನಮ್ಮ ಟ್ರಸ್ಟಿಗೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಶ್ವಿತ್ ಚಿಕಿತ್ಸಾ ಸಲಹಾ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಮಾತನಾಡಿ ಗ್ಲೋಬಲ್ ಚಾರಿಟೇಬಲ್ ಟ್ರಸ್ಟ್ ಮಾಡಿದ ಈ ಒಂದು ಉತ್ತಮ ಕಾರ್ಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ದೂರದ ಊರಿನವರಾದರೂ ನಮ್ಮ ಕೋರಿಕೆಗೆ ಸ್ಪಂದಿಸಿ ನಮ್ಮೂರಿನ ಒಬ್ಬ ಬಾಲಕನ ಚಿಕಿತ್ಸೆಗೆ ಇಷ್ಟೊಂದು ಬೃಹತ್ ಮೊತ್ತವನ್ನು ಸಂಗ್ರಹಿಸಲು ಕಾರಣಕರ್ತರಾದವರನ್ನು ಸುಳ್ಯದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಸಹಕರಿಸಿದ ಸರ್ವರಿಗೂ ಧನ್ಯವಾದಗಳು ಸಲ್ಲಿಸಿದರು.


ಸಮಿತಿಯ ಕನ್ವೀನರ್ ಕೆ ಎಸ್ ಉಮ್ಮರ್ ಮಾತನಾಡಿ ಇಸ್ಲಾಮಿನಲ್ಲಿ ಮನುಷ್ಯನ ಹಸಿವು ಮತ್ತು ಅನಾರೋಗ್ಯಕ್ಕೆ ಅವಶ್ಯಕತೆ ಒದಗಿದಾಗ ಇಸ್ಲಾಮಿನಲ್ಲಿ ನಿಷಿದ್ಧ ಪಡಿಸಿದ ವಸ್ತುಗಳನ್ನು ಬೇಕಾದರೆ ಆಹಾರವಾಗಿ ಅಥವಾ ಔಷಧಿಯಾಗಿ ಬಳಸಿಕೊಳ್ಳಬಹುದು.


ಆರೋಗ್ಯಕ್ಕೆ ಮತ್ತು ಹಸಿವಿಗೆ ಇಷ್ಟೊಂದು ಮಹತ್ವ ಇರುವಾಗ ಇಲ್ಲಿ ಯಾವುದೇ ಜಾತಿ ಧರ್ಮದ ಅಂತರವಿರುವುದಿಲ್ಲ. ಕೇವಲ ಮನುಷ್ಯತ್ವಕ್ಕೆ ಮಾತ್ರ ಬೆಲೆ ಇರುತ್ತದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಇಂದು ಸುಳ್ಯದ ಸರ್ವ ಜನತೆ ಈ ಪುಟ್ಟ ಮಗುವಿನ ಚಿಕಿತ್ಸೆಗೆ ಯಶಸ್ವಿ ಸ್ಪಂದನೆಯನ್ನು ನೀಡಿದ್ದಾರೆ. ಸಹಕರಿಸಿದ ಸರ್ವರನ್ನು ನಮ್ಮ ಸಮಿತಿ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ನಗರ ಪಂಚಾಯತಿ ಸದಸ್ಯ ಎಂ ವೆಂಕಪ್ಪಗೌಡ, ಗಾಂಧಿನಗರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ, ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿ ಅನಿಲ್ ಮಲಪುರಂ, ಹಿರಿಯರಾದ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು ಉಪಸ್ಥಿತರಿದ್ದರು.