ಕನಕಮಜಲು : ಪ್ರಥಮ ಹಂತದ ಗ್ರಾಮಸಭೆ

0


ಕನಕಮಜಲು ಗ್ರಾಮ ಪಂಚಾಯತಿಯ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ಜ.17ರಂದು ಜರುಗಿತು.


ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ಅವರು ಗ್ರಾಮಸಭೆಯ ವರದಿ ವಾಚಿಸಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಅವರು ಗತಸಭೆಯ ವರದಿ ವಾಚಿಸಿದರು. ಸಿಬ್ಬಂದಿ ಪ್ರಭಾಕರ ಅವರು ಜಮಾಖರ್ಚಿನ ವಿವರ ಓದಿದರು.


ಗ್ರಾಮದಲ್ಲಿ ನೀರಿನ ತೆರಿಗೆ ಕಟ್ಟಲು ಹೆಚ್ಚಿನವರು ಬಾಕಿಯಿದ್ದು, ಮುಂದಿನ ಒಂದು ತಿಂಗಳೊಳಗೆ ಕಟ್ಟದಿದ್ದಲ್ಲಿ ಡಿಸ್ಕನೆಕ್ಟ್ ಮಾಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಹೇಳಿದರು.


ಮೆಸ್ಕಾಂ ಇಲಾಖೆಯ ಅಧಿಕಾರಿ ಮಾಹಿತಿ ನೀಡುತ್ತಾ ಮುಂದಿನ ದಿನಗಳಲ್ಲಿ ಕನಕಮಜಲಿಗೆ ಪ್ರತ್ಯೇಕ ವಿದ್ಯುತ್ ಫೀಡರ್ ಬರಲಿದ್ದು, ಆಗ ಈ ಭಾಗದ ವೋಲ್ಟೇಜ್ ಸಮಸ್ಯೆ ಸರಿಯಾಗಲಿದೆ ಎಂದರು.


ವಿದ್ಯುತ್ ಟಿ.ಸಿ. ಇರುವಲ್ಲಿ ಕೆಳಗಡೆ ಕಾಡುಪೊದೆ ತುಂಬಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಗ್ರಾ.ಪಂ. ಸದಸ್ಯ ಇಬ್ರಾಹಿಂ ಕಾಸಿಂ ಆಗ್ರಹಿಸಿದರು. ಕನಕಮಜಲಿಗೆ ಮಂಡೆಕೋಲು ಗ್ರಾಮಕರಣಿಕರಾದ ಅಜಿತ್ ಅವರು ಪ್ರಭಾರ ಗ್ರಾಮಕರಣಿಕರಾಗಿದ್ದು, ವಾರದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಕನಕಮಜಲಿನ ಕಛೇರಿಯಲ್ಲಿ ಲಭ್ಯರಿರುವುದಾಗಿ ತಿಳಿಸಿದರು.


ಗ್ರಾಮಸ್ಥರಾದ ಅವಿನಾಶ್ ಕಾರಿಂಜ ಅವರು ಮಾತನಾಡಿ ನಮ್ಮ ಕೃಷಿ ತೋಟಕ್ಕೆ ಸಾಕು ಪ್ರಾಣಿಗಳು ಬಂದು ಕೃಷಿ ನಾಶ ಮಾಡುತ್ತಿದ್ದು, ಈ ಬಗ್ಗೆ ಸ್ಥಳೀಯವಾಗಿ ಹಲವು ಬಾರಿ ಹೇಳಿದರೂ, ಯಾರೂ ಗಮನ ನೀಡುತ್ತಿಲ್ಲ. ಬೇಲಿ ಹಾಕಿದರೆ ಬೇಲಿಯನ್ನೇ ಮುರಿದು ಬರುತ್ತಿವೆ. ಈ ಬಗ್ಗೆ ಗ್ರಾ.ಪಂ‌. ಗಮನಹರಿಸಬೇಕು ಎಂದು ಹೇಳಿದರು. ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.


ಉಗ್ಗಮೂಲೆ ಪರಿಸರದಲ್ಲಿ ಜಲಜೀವನ್ ಮಿಷನ್ ವತಿಯಿಂದ ಪೈಪ್ ಲೈನ್ ಹಾಕಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಪೈಪ್ ಒಡೆದಿದ್ದು, ನೀರಿನ ಸಮಸ್ಯೆ ಎದುರಾಗಿರುವುದಾಗಿ ತಿಲಕ ಅವರು ಹೇಳಿದಾಗ , ಸಂಬಂಧಿಸಿದವರಿಗೆ ತಿಳಿಸುವುದಾಗಿ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಹೇಳಿದರು.

ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ, ಸದಸ್ಯರುಗಳಾದ ಶ್ರೀಮತಿ ಪ್ರೇಮಲತಾ ಪಂಜಿಗುಂಡಿ, ಶ್ರೀಮತಿ ಶಾರದಾ ಉಗ್ಗಮೂಲೆ, ಶ್ರೀಮತಿ ಸುಮಿತ್ರ ಕುತ್ಯಾಳ, ಇಬ್ರಾಹಿಂ ಕಾಸಿಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.