ಆಲೆಟ್ಟಿ: ಮಿತ್ತಡ್ಕದಲ್ಲಿ ಅಕ್ರಮವಾಗಿ ದನ ಕಳ್ಳ ಸಾಗಾಟದ ಕಾರು ಪಲ್ಟಿ ಜಖಂ- ಓರ್ವ
ಆರೋಪಿ ಪೋಲಿಸ್ ವಶ,ಮತ್ತೊಬ್ಬ ಆರೋಪಿ ಪರಾರಿ

0

ಆಲೆಟ್ಟಿಯ ಮಿತ್ತಡ್ಕ ಎಂಬಲ್ಲಿ ಅಕ್ರಮವಾಗಿ ಕೆ‌.ಎಲ್.60 ಎಂ. 9148 ನಂಬರಿನ ಆಲ್ಟೋ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಳ್ಳತನ ಮಾಡಿ ದನ ಸಾಗಾಟ ಮತ್ತು ಅಕ್ರಮ ‌ಮದ್ಯ ಸಾಗಾಟ ಮಾಡುತ್ತಿದ್ದ ಕಾರೊಂದು ರಾತ್ರಿ ಪಲ್ಟಿಯಾದ ಘಟನೆ ಜ.21 ರಂದು ವರದಿಯಾಗಿದೆ.
ಸುಳ್ಯ ಕಡೆಯಿಂದ ಕೇರಳದ ಬಂದಡ್ಕ ಕಡೆಗೆ ಕೋಲ್ಚಾರು ಮಾರ್ಗವಾಗಿ ದನ ಸಾಗಾಟ ಮತ್ತು ಅಕ್ರಮ ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಿತ್ತಡ್ಕ ರೋಟರಿ ಶಾಲೆಯ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಸಂಭವಿಸಿದೆ. ಕಾರಿನಲ್ಲಿ ಸುಳ್ಯದ ಮೊಗರ್ಪಣೆಯ ಹ್ಯಾರಿಸ್ ಕಾಂಪ್ಲೆಕ್ಸ್ ನಲ್ಲಿ ಡಿಲೈಟ್ ಬೇಕರಿಯನ್ನು ನಡೆಸುತ್ತಿದ್ದ ಅಸ್ಕರ್ ಎಂಬಾತ ಮಾತ್ರ ಸಿಕ್ಕಿದ್ದು ಮತ್ತೊಬ್ಬ ಆರೋಪಿ ಉಸ್ಮಾನ್ ಎಂಬಾತ ಓಡಿ ಹೋಗಿರುವುದಾಗಿ ಅಸ್ಕರ್ ತಿಳಿಸಿರುತ್ತಾನೆ. ಕಾರಿನಲ್ಲಿ ಎರಡು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ಸಾಗಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.


ಈ ರಸ್ತೆ ಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕಾರು ಪಲ್ಟಿಯಾದುದನ್ನು ಗಮನಿಸಿದಾಗ ದನ ಸಾಗಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂತು. ಸ್ಥಳೀಯ ಪ್ರಯಾಣಿಕರು ತಕ್ಷಣ ಸುಳ್ಯ ಪೋಲಿಸರಿಗೆ ವಿಷಯ ತಿಳಿಸಿದ ಮೇರೆಗೆ ಎಸ್.ಐ.ದಿಲೀಪ್ ಹಾಗೂ ಪೋಲಿಸ್ ಸಿಬ್ಬಂದಿ ಯವರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಕಾರಿನಲ್ಲಿ ದನಗಳ ಜತೆ ಮದ್ಯದ ಬಾಟಲುಗಳು ಸಿಕ್ಕಿವೆ. ಸುದ್ದಿ ತಿಳಿದು ಘಟನೆಯ ಸಂದರ್ಭದಲ್ಲಿ ಸ್ಥಳೀಯ ಸಂಘಟನೆಯ ಯುವಕರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.ಬಳಿಕ ಕಾರಿನಲ್ಲಿದ್ದ ದನಗಳನ್ನು ಸಂಘಟನೆಯ ಕಾರ್ಯಕರ್ತರು ಹೊರ ತೆಗೆದು ಆರೈಕೆ ಮಾಡಿ ಪಿಕ್ ಅಪ್ ನಲ್ಲಿ ಸುಳ್ಯ ಪೋಲಿಸ್ ಠಾಣೆಗೆ ಕರೆ ತಂದು ಠಾಣೆಯ ಆವರಣದಲ್ಲಿ ಕಟ್ಟಿ ಹಾಕಲಾಯಿತು.
ಸುಳ್ಯ
ಪೋಲಿಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.