ಬೆಳ್ಳಾರೆ : ಅಮರ ಸುಳ್ಯ ಸ್ವಾತಂತ್ರ್ಯ ಸ್ಮಾರಕ ನಿರ್ಮಾಣಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯಿಂದ 30 ಲಕ್ಷ ಅನುದಾನ ಮಂಜೂರು

0

ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 30 ಲಕ್ಷ ರೂ ಅನುದಾನ ಮಂಜೂರಾಗಿದೆ. 1837ರಲ್ಲಿ ನಡೆದ ಅಮರ ಸುಳ್ಯ ಹೋರಾಟದ ಸಂದರ್ಭದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಬೆಳ್ಳಾರೆಯ ಬ್ರಿಟೀಷರ ಖಜಾನೆಯನ್ನು ವಶಪಡಿಸಿಕೊಂಡಿದ್ದರು.

ಬೆಳ್ಳಾರೆ ಬಂಗ್ಲೆಗುಡ್ಡೆಯ ಖಜಾನೆ ಕಟ್ಟಡಕಟ್ಟಡ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಈಗಲೂ ಇದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಎರಡು ದಶಕಗಳ ಮೊದಲೇ ಬ್ರಿಟೀಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಸ್ಮಾರಕ ನಿರ್ಮಿಸಬೇಕು ಎಂಬ ಬೇಡಿಕೆ ಇತ್ತು. ಈ ಹಿನ್ನಲೆಯಲ್ಲಿ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ 30 ಲಕ್ಷ ಅನುದಾನ ಬಿಡುಗಡೆ ಆಗಿದೆ ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ತಿಳಿಸಿದ್ದಾರೆ.

ಸ್ಮಾರಕ ನಿರ್ಮಾಣದ ಬಗ್ಗೆ ಸಚಿವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಖಜಾನೆ ಕಟ್ಟಡವನ್ನು ಸ್ಮಾರಕವಾಗಿ ಹಾಗೆಯೇ ಉಳಿಸಲಾಗುವುದು. ಅದಕ್ಕೆ ಅಗತ್ಯವಾದ ನವೀಕರಣ ಕಾಮಗಾರಿ ಮಾಡಲಾಗುವುದು. ಅಲ್ಲದೆ ಅದಕ್ಕೆ ಸುತ್ತಲೂ ಕೋಟೆಯ ಮಾದರಿಯ ನಿರ್ಮಾಣ ನಡೆಸಲಾಗುವುದು.‌ ಮುಷ್ಠಿ ರೂಪದ ಸ್ತಂಭ ಅದರ ಕೆಳ ಭಾಗದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಸೇರಿದಂತೆ ಸ್ವಾತಂತ್ರ್ಯಹೋರಾಟಗಾರರ ಶಿಲ್ಪಗಳು ಮತ್ತಿತರ ನಿರ್ಮಾಣ‌ ಮಾಡುವ ಯೋಚನೆ ಇದೆ ಎಂದು ಸಚಿವ ಅಂಗಾರರು ಹೇಳಿದ್ದಾರೆ.

ಈ ಬಗ್ಗೆ ಚರ್ಚೆ ನಡೆಸಲಾಗಿದ್ದು ಎರಡು ಮೂರು ಮಾದರಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಬೆಳ್ಳಾರೆಯಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಮಾಡುವ ಯೋಜನೆ ಇದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ 75 ನೇ ವಾರ್ಷಿಕದ ಅಂಗವಾಗಿ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.