
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ. 26ರಿಂದ ಜ. 29ರ ವರೆಗೆ ವಿಜೃಂಭಣೆಯಿಂದ ಜರಗಲಿದ್ದು, ಜ. 28ರಂದು ಬೆಳಿಗ್ಗೆ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಸಪರಿವಾರ ದೈವಗಳ ಹಾಗೂ ತೋಟದ ಮೂಲೆಯಿಂದ ರುದ್ರಚಾಮುಂಡಿ ದೈವಗಳ ಕಿರುವಾಲು ಹೊರಟು ಪ್ರಾತಃಕಾಲ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ಏರುವುದು, ನರ್ತನ ಸೇವೆ ನಡೆಯುತ್ತಿದೆ.

ಬಳಿಕ ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆ, ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಲಿದೆ. ಪೂ. 11:30 ರಿಂದ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಆಡಳಿತ ಧರ್ಮದರ್ಶಿ ಹೆಗ್ಗಡೆ ಪರಮೇಶ್ವರಯ್ಯ ಕಾಂಚೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಮಂಗಳೂರು ವಿಭಾಗ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಸಾಣೂರುಗುತ್ತು ದೇವಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬೆಳ್ತಂಗಡಿ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಜೈನ್, ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಎಂ.ಪಿ ಉಮೇಶ್, ಪುರಂದರ ಗೌಡ ಸಪ್ತಗಿರಿ ಕಳಂಜ ಭಾಗವಹಿಸಲಿದ್ದಾರೆ. ಸಂಜೆ 7.00ರಿಂದ ಪ್ರಸಿದ್ಧ ಕಲಾವಿದರ ಕೊಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ ನಡೆಯಲಿದೆ.

ರಾತ್ರಿ 9:00 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಜ. 29ರಂದು ಬೆಳಿಗ್ಗೆ 7.30 ಕ್ಕೆ ತಂಟೆಪಾಡಿ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಿಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಹೊರಡುವುದು ಮತ್ತು ಮೂರುಕಲ್ಲಡ್ಕದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಕಲ್ಲಮಾಡದಲ್ಲಿ ದೈವಗಳ ನರ್ತನ ಸೇವೆ, ಬೂಳ್ಯ ವಿತರಣೆ ನಡೆಯಲಿದೆ. ಅಪರಾಹ್ನ 2.30ರಿಂದ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿ ನಡೆದು ಮಾರಿ ಹೊರಡಲಿದೆ.
