ಆಲೆಟ್ಟಿ:ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರ ಸಭೆ

0

ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಉಚಿತ ಮಾಹಿತಿ

ಗ್ರಾಮ ಸಮಿತಿ ರಚನೆ-ಅಧ್ಯಕ್ಷ : ಚಂದ್ರಕಾಂತ್ ನಾರ್ಕೋಡು, ಕಾರ್ಯದರ್ಶಿ : ಭಾನುಪ್ರಕಾಶ್ ಕಲ್ಲೆಂಬಿ, ಖಜಾಂಜಿ : ವಸಂತ ಬಾಳೆಹಿತ್ಲು

“ಗ್ರಾಮೀಣ ಪ್ರದೇಶದಲ್ಲಿ ಇರುವ ಕೃಷಿಕರಿಗೆ ಮಾಹಿತಿ ಕೊರತೆಯಿಂದ ಕೆಲವು ಸಂದರ್ಭಗಳಲ್ಲಿ ನಷ್ಟ ಸಂಭವಿಸುವುದರಿಂದ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೃಷಿಕರು ಪೂರ್ಣ ಪ್ರಮಾಣದಲ್ಲಿ ಸ್ವತಂತ್ರ ರಾಗಲಿಲ್ಲ.ಸಮಯಕ್ಕೆ ಸರಿಯಾಗಿ ಮಾಹಿತಿ ದೊರಕದೆ ಇರುವುದರಿಂದ ತಾವು ಬೆಳೆದ ಬೆಳೆಗಳಿಗೆ ಸಮರ್ಪಕ‌ ಬೆಲೆ ಸಿಗದೆ ತೊಂದರೆಗೊಳಗಾಗುತ್ತಿರುವುದು ಸಹಜವಾಗಿ ಕಂಡು ಬರುತ್ತಿದೆ. ಅನುಭವಿ ಕೃಷಿ ಕರಿಂದ ಮಾಹಿತಿ ಸಂಗ್ರಹಿಸಿ ರೈತರಿಗೆ ನೆರವಾಗುವ ಸಲುವಾಗಿ ಸುದ್ದಿ ಕೃಷಿ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ರೈತರಿಗೆ ಮಾರುಕಟ್ಟೆ ವಿಚಾರವಾಗಿ ಅಥವಾ ಇನ್ನಿತರ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿಯನ್ನು ಸೇವೆಯಾಗಿ ನೀಡುವ ಸದುದ್ದೇಶ ಸೇವಾ ಕೇಂದ್ರ ಹೊಂದಿದೆ ಎಂದು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರ ವೇದಿಕೆಯ ವತಿಯಿಂದ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಭವಾನಿ ಶಂಕರ ಅಡ್ತಲೆ ಯವರು ಮಾತನಾಡಿ
“ಸುಮಾರು 30 ವರ್ಷಗಳ ಹಿಂದೆಯೇ ಅಡಿಕೆ ಕೃಷಿಗೆ ಹಳದಿ ರೋಗ ಎಂಬ ಮಾರಕ ರೋಗ ಬಾಧಿಸಿದ್ದು ಅದರ ನಿರ್ಮೂಲನೆ ಮಾಡುವ ರೋಗ ನಿರೋಧಕ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳಿಂದ ಸಾಧ್ಯವಾಗಲಿಲ್ಲ. ಸರಕಾರ ಈ ವಿಚಾರವಾಗಿ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ. ರೋಗ ಬಾಧಿಸಿರುವ ತೋಟ ಸಂಪೂರ್ಣ ನಾಶವಾಗಿ ವರ್ಷಕ್ಕೆ 15 ಲಕ್ಷ ಆದಾಯವಿದ್ದ ತೋಟದಲ್ಲಿ 5 ಕೆ.ಜಿ.ಅಡಿಕೆ ಸಿಗುತ್ತಿಲ್ಲ. ತಾಲೂಕಿನ 23 ಗ್ರಾಮಗಳಲ್ಲಿ ಇರುವ ಅಡಿಕೆ ತೋಟಕ್ಕೆ ಹಳದಿ ರೋಗ ತಗುಲಿ ವಿನಾಶದಂಚಿನಲ್ಲಿದೆ. ಕೃಷಿಕರು ಇದನ್ನು ನಂಬಿಕೊಂಡು ಹಣಕಾಸಿನ ವ್ಯವಸ್ಥೆಗಾಗಿ ಬ್ಯಾಂಕುಗಳಲ್ಲಿ, ಸಹಕಾರಿ ಸಂಘಗಳಲ್ಲಿ ಸಾಲ ಮಾಡಿ ತಮ್ಮ ಜಮೀನಿನಲ್ಲಿ ತೊಡಗಿಸಿರುತ್ತಾರೆ. ಇದೀಗ ಆದಾಯವಿಲ್ಲದೆ ಕೃಷಿಕರು ಅತಂತ್ರ ಸ್ಥಿತಿ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರವೆಂಬಂತೆ ಈಗಾಗಲೇ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆ ಯಾಗಿರುವ ಕೃಷಿಕರ ಪಾಲಿನ ಆಶಾಕಿರಣವಾಗಿರುವ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಮೂಲಕ ಸರಕಾರದ ಗಣನೆಗೆ ತರುವ ಕಾರ್ಯ ಮಾಡಬೇಕಾಗಿದೆ.


ಅಡಿಕೆ ಹಳದಿ ರೋಗ ಪೀಡಿತ ಜಮೀನಿನಲ್ಲಿ ಪರ್ಯಾಯ ಕೃಷಿ ಬೆಳೆಯಲು 1 ಎಕ್ರೆಗೆ 5 ಲಕ್ಷ ಪರಿಹಾರ ಮತ್ತು ದೀರ್ಘಾವಧಿ ಸಾಲಗಳನ್ನು 10 ವರ್ಷಗಳ ಕಾಲ ಬಡ್ಡಿ ರಹಿತವಾಗಿ ಮುಂದೂಡುವಂತೆ ಬೇಡಿಕೆಯನ್ನು ಡಾ.ವೀರೇಂದ್ರ ಹೆಗ್ಗಡೆಯವರ ಮುಖೇನ ಸರಕಾರಕ್ಕೆ ಮುಟ್ಟುವಂತೆ ಮಾಡಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದು ವಿವರ ತಿಳಿಸಿದರು.
ನ್ಯಾಯವಾದಿ ವೇದಿಕೆಯ ಸಂಚಾಲಕ ಎಂ.ವೆಂಕಪ್ಪ ಗೌಡ ರವರು ಮಾತನಾಡಿ “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜಕೀಯ ರಹಿತವಾಗಿ ರೈತರ ಧ್ವನಿಯನ್ನು ಸರಕಾರಕ್ಕೆ ಮುಟ್ಟುವ ತನಕ ಹೋರಾಟ ಮಾಡುವವರಿದ್ದೇವೆ. ನೊಂದ ಕೃಷಿಕರನ್ನು ಬದುಕಿಸುವ ಬೇಡಿಕೆ ಇರಿಸಲಾಗುವುದು.ಸರಕಾರ ಪರಿಹಾರ ಮೊತ್ತ ರೂ, 1000/- ಕೋಟಿ ಮೊತ್ತದ ಪ್ಯಾಕೇಜ್ ನ್ನು ಕೃಷಿಕರಿಗೆ ಮೀಸಲಿಡಬೇಕು. ಕೃಷಿಕರು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಡಾ.ವೀರೇಂದ್ರ ಹೆಗ್ಗಡೆ ಯವರ ಮೇಲೆ ನಂಬಿಕೆ ಇರಿಸಿದ ಕೃಷಿಕರು ಯೋಜನೆಯ ಮೂಲಕ ಹಮ್ಮಿಕೊಳ್ಳುವ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಮುಂದಿನ ದಿನ ಹತ್ತು ಸಾವಿರ ಕೃಷಿಕರು ಒಟ್ಟು ಸೇರಿ ಕಾಲ್ನಡಿಗೆಯ ಜಾಥಾದೊಂದಿಗೆ ಸಾಗಿ ಸಮಾವೇಶ ಮಾಡುವ ಮೂಲಕ ಸರಕಾರದ ಗಮನ ಸೆಳೆದು ಮರೀಚಿಕೆಯಾಗಿರುವ ಬೇಡಿಕೆಗೆ ಆಗ್ರಹಿಸುವಂತಾಗಬೇಕು ಎಂದುಉಲ್ಲೇಖಿಸಿದರು.
ತಾಲೂಕು ಮಟ್ಟದ ರೈತರ ದೊಡ್ಡ ಮಟ್ಟದ ಸಮಾವೇಶ ಫೆಬ್ರವರಿ ತಿಂಗಳಲ್ಲಿ ನಡೆಸಿ ಸುಮಾರು 10 ಸಾವಿರಕ್ಕೂ ಮಿಕ್ಕಿ ರೈತರ ನ್ನು ಸೇರಿಸಿ ಡಾ.ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ನಮ್ಮ ಬೇಡಿಕೆ ಇರಿಸುವ ಚಿಂತನೆ ಹೊಂದಿದ್ದೇವೆ ಎಂದು ಎನ್.ಎ.ರಾಮಚಂದ್ರ ರವರು ಅಧ್ಯಕ್ಷತೆ ವಹಿಸಿ ತಿಳಿಸಿದರು.

ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ವೇದಿಕೆಯ ಸಂಚಾಲಕ ನ್ಯಾಯವಾದಿ ಎಂ.ವೆಂಕಪ್ಪ ಗೌಡ ,ಎ.ಪಿ.ಎಂ.ಸಿ.
ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಪಂಚಾಯತ್ ಸದಸ್ಯ ಸತ್ಯ ಪ್ರಸಾದ್ ಗಬ್ಬಲ್ಕಜೆ,ಸೊಸೈಟಿ ನಿರ್ದೇಶಕ ಸುದರ್ಶನ ಪಾತಿಕಲ್ಲು,ಆಲೆಟ್ಟಿ ದೇವಸ್ಥಾನದ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ವ್ಯ.ಸ.ಸದಸ್ಯ ಅಚ್ಚುತ ಮಣಿಯಾಣಿ ಆಲೆಟ್ಟಿ,ಧರ್ಮಸ್ಥಳ ಯೋಜನೆಯ ಒಕ್ಕೂಟದ ಅಧ್ಯಕ್ಷ ನಿತ್ಯಾನಂದ ಕಲ್ಲೆಂಬಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಿತಿ ರಚಿಸಿ ಅಧ್ಯಕ್ಷ ಚಂದ್ರಕಾಂತ ನಾರ್ಕೋಡು, ಕಾರ್ಯದರ್ಶಿ ಭಾನುಪ್ರಕಾಶ್ ಕಲ್ಲೆಂಬಿ, ಖಜಾಂಜಿ ವಸಂತ ಬಾಳೆಹಿತ್ಲು ಹಾಗೂ ವಾರ್ಡುವಾರು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸೇವಾ ಪ್ರತಿನಿಧಿ ರೋಹಿಣಿ ಕುಡೆಕಲ್ಲು ಸ್ವಾಗತಿಸಿ, ವಂದಿಸಿದರು.
ವಲಯ ಮೇಲ್ವಿಚಾರಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here