ಫೆ.11 : ಸುಳ್ಯ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಕಾರ್ಯಕ್ರಮ

0

ಸುಳ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯದ್ಯಂತ ಫೆಬ್ರವರಿ 11ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದ್ದು,ಇದರ ಅಂಗವಾಗಿ ಸುಳ್ಯ ನ್ಯಾಯಾಲಯದಲ್ಲಿ ಫೆ. 11ರಂದು ಬೆಳಿಗ್ಗೆ 9:30ರಿಂದ ಸಂಜೆ 4 ಗಂಟೆಯವರೆಗೆ ಲೋಕ್ ಅದಾಲತ್ ನಡೆಯಲಿದೆ.

ಇದರ ಅಂಗವಾಗಿ ಇಂದು ಸುಳ್ಯ ನ್ಯಾಯಾಲಯದ ಕಿರಿಯ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಸುಳ್ಯ,ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗಳ ಅಧಿಕಾರಿಗಳು, ಪತ್ರಿಕಾ ಮಾಧ್ಯಮದವರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ನ್ಯಾಯಾಧೀಶೆ ಕು. ಅರ್ಪಿತಾ ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಳ್ಳಲು ಲೋಕ್ ಅದಾಲತ್ ಕಾರ್ಯಕ್ರಮ ಸುವರ್ಣಾವಕಾಶವಾಗಿದೆ.

ಲೋಕ್ ಅದಾಲತ್ತಿನಲ್ಲಿ ರಾಜಿ ಆಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೇಟ್ ಅಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ಸಾಲ ವಸೂಲಾತಿ ನ್ಯಾಯಾಧೀಕರಣ ಪ್ರಕರಣಗಳು, ವೈವಾಹಿಕ/ ಕುಟುಂಬ ನ್ಯಾಯಾಲಯದ ಪ್ರಕರಣಗಳು, (ವಿಚ್ಛೇದನೆಯನ್ನು ಹೊರತುಪಡಿಸಿ), ಚಕ್ಕು ಅಮಾನ್ಯ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯ ಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ರಾಜಿ ಯಾಗಬಲ್ಲ ಸಿವಿಲ್ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳು ಮುಂತಾದ ವಿಷಯಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಬಾರಿ ವಿಶೇಷವಾಗಿ ಸಾರಿಗೆ ಮತ್ತು ರಸ್ತೆ ಸುರಕ್ಷಿತ ಇವರ ಪ್ರಸ್ತಾವನೆಯಲ್ಲಿ ರಾಜ್ಯದ್ಯಂತ ಸಂಚಾರಿ ಇ ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 51 ರಿಯಾಯಿತಿ ನೀಡುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದವು ತೀರ್ಮಾನವಾಗುತ್ತದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು.
ಸಂದಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕೆ ಇದೊಂದು ವಿಶೇಷ ಅವಕಾಶವಾಗಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಕೇಳಿಕೊಂಡರು.

ಸಭೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಮಂಜುನಾಥ್, ಬೆಳ್ಳಾರೆ ಪೊಲೀಸ್ ಠಾಣಾ ನಿರೀಕ್ಷಕ ಸುಹಾಸ್, ಸುಳ್ಯ ಪೊಲೀಸ್ ಠಾಣಾ ಎಎಸ್ಐ ಗಿರಿಯಪ್ಪ, ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.