ಸುಳ್ಯ ತಾಲೂಕು ಮರಾಠ ಕ್ಷತ್ರಿಯ ಸೇವಾ ಸಂಘದಿಂದ ಬೆಳದಿಂಗಳ ಊಟ

0

ಸುಳ್ಯದ ಮರಾಠ ಕ್ಷತ್ರಿಯ ಸೇವಾ ಸಂಘ ಹಾಗೂ ಮರಾಠ ಕ್ಷತ್ರಿಯ ಯುವ ಘಟಕದ ಆಶ್ರಯದಲ್ಲಿ ಬೆಳದಿಂಗಳ ಊಟ ಕಾರ್ಯಕ್ರಮ ಜ.28 ರಂದು ರಾತ್ರಿ ಅಜ್ಜಾವರ ಕಾಂತಮಂಗಲದಲ್ಲಿರುವ ಸಂಘದ ನಿವೇಶನದಲ್ಲಿ ನಡೆಯಿತು.


ಮಾತೃ ಘಟಕದ ಅಧ್ಯಕ್ಷ ಸುಂದರ ರಾವ್, ಕಾರ್ಯದರ್ಶಿ ಚಿದಾನಂದ ರಾವ್ ಹಳೆಗೇಟು, ಯುವ ಘಟಕದ ಅಧ್ಯಕ್ಷ ನವೀನ್, ಕಾರ್ಯದರ್ಶಿ ಅರುಣ್ ಕೇರ್ಪಳ ಹಾಗೂ ನಿಯೋಜಿತ ಯುವ ಅಧ್ಯಕ್ಷ ಮಧುಕಿರಣ್ ಕೊಡಿಯಾಲಬೈಲುರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಸಮಾಜದ ಮಹಿಳೆಯರು, ಪುರುಷರು ಸೇರಿದ್ದರು.


ಈ ಬೆಳದಿಂಗಳ ಊಟ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಶ್ರೀದೇವಿ ನಾಗರಾಜ ಭಟ್‌ರವರು ಕೆಲವು ಆಟಗಳನ್ನು ಆಡಿಸುವ ಮೂಲಕ ಹಾಗೂ ಹಾಡು ಹಾಡಿಸುವುದರ ಮೂಲಕ ದೇಶಭಕ್ತಿ ಉದ್ದೀಪನಗೊಳಿಸಿದರು. ಇನ್ನಿಬ್ಬರು ಅತಿಥಿಗಳಾದ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಹಾಗೂ ಬಸ್ ಟಿಕೆಟ್ ಬುಕ್ಕಿಂಗ್ ಏಜೆನ್ಸಿಯ ಕೇಶವ ನಾಯಕ್ ರವರು ತಮ್ಮ ಅನುಭವಗಳನ್ನು ಹಂಚಿಕೊಂಡರು.


ಸಮಾಜದ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆದವು. ತಾಲೂಕಿನಲ್ಲಿ ಮರಾಠ ಕ್ಷತ್ರಿಯ ಸಮಾಜದ ಸುಮಾರು 80 ಮನೆಗಳಿದ್ದು, ಬಹುತೇಕ ಮನೆಗಳವರು ವಿವಿಧ ಖಾದ್ಯಗಳನ್ನು ಮಾಡಿ ತಂದಿದ್ದರು. 35 ಬಗೆಯ ಖಾದ್ಯಗಳ ಭೋಜನವನ್ನು ಸಾಲಾಗಿ ನೆಲದಲ್ಲಿ ಕುಳಿತಲ್ಲಿಗೆ ತಂದು ಬಡಿಸಲಾಯಿತು.
ತಾಲೂಕಿನಲ್ಲಿ ಚಿಕ್ಕ ಸಂಖ್ಯೆಯಲ್ಲಿರುವ ಮರಾಠ ಕ್ಷತ್ರಿಯ ಸಮಾಜದವರು ಒಗ್ಗಟ್ಟಿನಲ್ಲಿ ಈ ಕಾರ್ಯಕ್ರಮ ಸಂಘಟಿಸಿದ್ದು ಗಮನಸೆಳೆಯಿತು.
ಮರಾಠ ಯುವ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಧು ಕೊಡಿಯಾಲಬೈಲು ರವರಿಗೆ ಸಂಘದ ಧ್ವಜ ನೀಡಿ ಅಧಿಕಾರ ವಹಿಸಲಾಯಿತು.