ಮಾ.14ರಂದು ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆಗಾಗಿ ನಿಧಿ ಸಂಗ್ರಹದ ಪ್ರತಿಭಟನೆ

0


ಪತ್ರಿಕಾಗೋಷ್ಠಿಯಲ್ಲಿ ಸಚಿವ ಅಂಗಾರ ಮತ್ತು ಹರೀಶ್ ಕಂಜಿಪಿಲಿ ಹೇಳಿಕೆಗೆ ಸಭೆಯಲ್ಲಿ ತೀವ್ರ ಆಕ್ರೋಶ


ಕೇಸರಿ ಶಾಲು ಹಾಕಿಯೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ : ನಾಗರಿಕರು


.ಸುಳ್ಯ – ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವ ಆ ಭಾಗದ ನಾಗರಿಕರು ಮಾ.14 ರಂದು ನಗರ ಪಂಚಾಯತ್ ಎದುರು ರಸ್ತೆಗಾಗಿ ನಿಧಿ ಸಂಗ್ರಹ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಇಂದು ಕಮಿಲಡ್ಕದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನೆ ರೂಪುರೇಷೆ ಗಳನ್ನು ಮಾಡಲಾಯಿತು. ಸಭೆಯಲ್ಲಿ ಸುಮಾರು ನೂರು ಮಂದಿ ನಾಗರಿಕರು ಭಾಗವಹಿಸಿದ್ದರು.
ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಸಚಿವ ಎಸ್.ಅಂಗಾರ ಮತ್ತು ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರು ಈ ರಸ್ತೆಗೆ ಸಂಬಂಧಿಸಿ ನೀಡಿದ ಹೇಳಿಕೆಗೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.


ಈ ಬಗ್ಗೆ ಸಭೆಯಲ್ಲಿ ಪತ್ರಿಕಾ ಹೇಳಿಕೆಯನ್ನು ಓದಲಾಯಿತು ” ಸುಳ್ಯ -ಕೊಡಿಯಾಲಬೈಲ್ -ದುಗ್ಗಲಡ್ಕ ರಸ್ತೆ ಕೇವಲ ಏಳು ಕಿಲೋಮೀಟರ್ ಉದ್ದವಿರುವ ಮತ್ತು ಬೆಳೆಯುತ್ತಿರುವ ಸುಳ್ಯಕ್ಕೆ ಅತ್ಯಂತ ಅವಶ್ಯಕವಾದ ರಸ್ತೆ. ಈ ರಸ್ತೆಯ ಅಭಿವೃದ್ಧಿಯ ಬೇಡಿಕೆ ಸುಮಾರು 25 ವರ್ಷಗಳ ಇತಿಹಾಸ ಹೊಂದಿದೆ. ಈ ರಸ್ತೆಗೆ ಸಂಬಂಧಿಸಿದ ಶೇಕಡ ತೊಂಬತ್ತರಷ್ಟು ಮತದಾರರು ಯಾವುದೇ ಫಲಾಪೇಕ್ಷಗಳಿಲ್ಲದೆ ಇದುವರೆಗೆ ತಮ್ಮದೇ ಪಕ್ಷವನ್ನೇ ಬೆಂಬಲಿಸಿಕೊಂಡು ಬಂದವರು. ಈ ರಸ್ತೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಪ್ರಥಮವಾಗಿ ಧ್ವನಿಯೆತ್ತಿದವರು ಬಿಜೆಪಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ದಿ.ಈಶ್ವರಪ್ಪ ಗೌಡ ಪಾನತ್ತಿಲರವರು. ಪಕ್ಷಕ್ಕಾಗಿ ದುಡಿದ ಇಂತಹ ಕಾರ್ಯಕರ್ತರ ಬೇಡಿಕೆಯನ್ನು ಈಡೇರಿಸುವ ಜವಾಬ್ದಾರಿ ಸ್ಥಾನದಲ್ಲಿರುವ ಹರೀಶ್ ಕಂಜಿಪಿಲಿಯವರು ಸಚಿವರೊಡಗೂಡಿ ಪತ್ರಿಕಾಗೋಷ್ಠಿಯಲ್ಲಿ ಭಿಕ್ಷಾಟನೆ ನಡೆಸಿ ರಸ್ತೆ ಮಾಡಿದರೆ ಅದು ಇತಿಹಾಸ. ಇದೆಲ್ಲಾ ವಿರೋಧ ಪಕ್ಷದವರು ರಾಜಕೀಯ ಲಾಭಕ್ಕೆ ನಡೆಸುವ ನಾಟಕ ಎಂದು ಹಗುರವಾಗಿ ಮಾತನಾಡಿ, ನೀವೇ ನಮ್ಮನ್ನು ವಿರೋಧ ಪಕ್ಷದವರು ಎಂದು ಬಿಂಬಿಸುವುದು ಪಕ್ಷದ ಮತದಾರರಿಗೆ ಮತ್ತು ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅತ್ಯಂತ ಅಪಮಾನವಾಗಿದೆ.


ಕಳೆದ ಬಾರಿ ರಸ್ತೆಗೆ ಸಂಬಂಧಿಸಿದ ಸಾರ್ವಜನಿಕ ಸಭೆಯಲ್ಲಿ ಸಾವು ಸಚಿವರ ಪ್ರತಿನಿಧಿಯಾಗಿ ಬಂದು 2022 ಡಿಸೆಂಬರ್ ಒಳಗೆ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇನೆ ಎಂದು ತಮ್ಮದೇ ಪಕ್ಷದ ಪಂಚಾಯತ್ ಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಮತದಾರರ ಸಮ್ಮುಖದಲ್ಲಿ ಭರವಸೆ ಕೊಟ್ಟಿರುತ್ತೀರಿ. ಈ ರಸ್ತೆಗೆ ಸಂಬಂಧಿಸಿದ ಸಚಿವರಾದಿಯಾಗಿ ತಾವು ನೀಡಿರುವ ಪ್ರತಿಯೊಂದು ಹೇಳಿಕೆಗಳು ಈ ಭಾಗದ ಪ್ರತಿಯೊಬ್ಬರ ಮೊಬೈಲಿನಲ್ಲಿದೆ. ಇಂತಹ ನಿಮ್ಮ ಹೇಳಿಕೆಗಳಿಂದ ಉತ್ತರಿಸಲಾಗದ ಪರಿಸ್ಥಿತಿ ಕಾರ್ಯಕರ್ತರಿಗೆ ಉಂಟಾಗಿದೆ. ಬಿಕ್ಷಾಟನೆ ಮಾಡಿಸಿ ರಸ್ತೆ ನಿರ್ಮಾಣ ಮಾಡಿದರೆ ಅದು ಇತಿಹಾಸ ಎಂಬ ಸವಾಲನ್ನು ಹಾಕಿದ್ದೀರಿ. ತಾವು ಹೇಳಿಕೆ ನೀಡುವ ಮೊದಲು ರಸ್ತೆಗಾಗಿ ಜನ ಭಿಕ್ಷೆ ಎತ್ತುವ ಪರಿಸ್ಥಿತಿ ಯಾಕೆ ಬಂತು ಎಂಬುದನ್ನು ಯೋಚಿಸಬೇಕಿತ್ತು .ನಿಮ್ಮ ಈ ಸವಾಲನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ ಅದಕ್ಕಾಗಿ ಮುಂದಿನ ಮಂಗಳವಾರ ಮಾ.14 ರಂದುನಗರ ಪಂಚಾಯತ್ ಬಳಿ ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸುತ್ತೇವೆ. ಈ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸುತ್ತಾರೆ ” ಎಂಬ ಹೇಳಿಕೆಯನ್ನು ಸಭೆಯಲ್ಲಿ ಓದಿ ಹೇಳಲಾಯಿತು.


ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಹೇಶ್ ಪುಚ್ಚಪ್ಪಾಡಿ ಹೋರಾಟದ ಅನುಭವಗಳನ್ನು ವಿವರಿಸಿದರು.
ಬಾಲಕೃಷ್ಣ ನಾಯರ್ ನೀರಬಿದಿರೆ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ರಾತ್ರಿ 12 ಗಂಟೆಯ ವರೆಗೆ ಅವರೊಂದಿಗೆ ಫೀಲ್ಡ್ ಮಾಡಿದ್ದೇವೆ. ನಮ್ಮ ಬೆವರಿನ ಹನಿ ಅವರಲ್ಲಿ ಇರಬಹುದು,ಆದರೆ ಅವರ ಬೆವರಿನ ಹನಿ ನಮ್ಮಲ್ಲಿ ಒಂದು ಚೂರು ಇಲ್ಲ.ರಾಜಕೀಯ ಲಾಭಕ್ಕಾಗಿ ಹೋರಾಟ ಎಂಬ ಸಚಿವರ ಹೇಳಿಕೆ ಬೇಸರ ತಂದಿದೆ ಎಂದು ಹೇಳಿದರು.


ಸುರೇಶ್ಚಂದ್ರ ಕಮಿಲ ಮಾತನಾಡಿ ನಮ್ಮ ಒಗ್ಗಟನ್ನು ಮುರಿಯುವ ತಂತ್ರಗಾರಿಕೆ ಮಾಡಬಹುದು.ಆದರೆ ಯಾರು ಕೂಡ ಅದಕ್ಕೆ ಬಲಿಯಾಗಬಾರದು. ರಸ್ತೆ ಆಗುವವರೆಗೆ ನಮ್ಮ ಒಗ್ಗಟ್ಟಿನ ಹೋರಾಟ ಮುಂದುವರಿಯಬೇಕು ಎಂದು ಹೇಳಿದರು.


ಸಭೆಯಲ್ಲಿ ಪ್ರಮುಖರಾದ ಕುಶ ನೀರಬಿದಿರೆ, ಡಾ. ಗಣೇಶ್ ಶರ್ಮ. ಶಂಭಯ್ಯ ಪಾರೆ, ಸೀತಾನಂದ ಬೇರ್ಪಡ್ಕ,ಗಿರೀಶ ಪಾಲಡ್ಕ, ಮನೋಜ್ ಪಾನತ್ತಿಲ, ಲೋಹಿತ್ ಮಾಣಿಬೆಟ್ಟು, ಇಬ್ರಾಹಿಂ ನೀರಬಿದಿರೆ, ಮೋಹನ್ ಬೇರ್ಪಡ್ಕ, ರವಿಚಂದ್ರ ಈಶ್ವರಡ್ಕ, ಡಾ.ಅಶೋಕ್ ಭಟ್, ಶಿವರಾಮ ಎಂ.ಪಿ.ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.