ಆಡಳಿತ ನಿಷ್ಕ್ರಿಯ ವಾದಾಗ ಹೋರಾಟ ಅನಿವಾರ್ಯ

0

ರಸ್ತೆ ಅಭಿವೃದ್ಧಿಗೆ ನಮ್ಮ ಎಂ.ಎಲ್.ಎ. ಮುತುವರ್ಜಿ ವಹಿಸದಿರುವುದು ಬೇಸರ

ಸುಳ್ಯ-ಕೊಡಿಯಾಲಬೈಲು-ದುಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ನಿಧಿ ಸಂಗ್ರಹಣಾ ಅಭಿಯಾನ

ಸುಳ್ಯ – ಜಟ್ಟಿಪಳ್ಳ – ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಆ ರಸ್ತೆ ಫಲಾನುಭವಿಗಳಿಂದ ನಿಧಿ ಸಂಗ್ರಹಣಾ ಅಭಿಯಾನದೊಂದಿಗೆ ಪ್ರತಿಭಟನಾ ಸಭೆಯು ಇಂದು ನ.ಪಂ. ಎದುರು ನಡೆಯಿತು.

ನೂರಾರು ಸಂಖ್ಯೆಯಲ್ಲಿ ರಸ್ತೆ ಫಲಾನುಭವಿಗಳು ಮೆರವಣಿಗೆಯಲ್ಲಿ ನ.ಪಂ. ಎದುರು ಸೇರಿದರು. ಅಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಭಟ್ ರವರು “ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅತೀ ಅಗತ್ಯ. ಈ ರಸ್ತೆ ಅಭಿವೃದ್ಧಿ ಆಗಬಹುದೆಂದು‌ ಇದುವರೆಗೆ ನಾವು ಕಾಯುತ್ತಿದ್ದೆವು. ಜನಪ್ರತಿನಿಧಿಗಳು ಭರವಸೆ ನೀಡುತ್ತಿದ್ದರು. ಆದರೆ ಇಂದು ಅವರ ಭರವಸೆ ಹುಸಿಯಾಗಿದೆ. ನಮ್ಮ ಶಾಸಕರು ಈ ಬಾರಿ ರಸ್ತೆ ಅಭಿವೃದ್ಧಿ ಮಾಡಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಅವರು‌ ಮುತುವರ್ಜಿ ವಹಿಸಿಲ್ಲ. ಇದೀಗ ಮಂತ್ರಿಯಾದರೂ ಅವರು ನಿರೀಕ್ಷಿತ ಮಟ್ಟದ ಕೆಲಸ ಮಾಡಿಲ್ಲ ಎಂದು‌ ಹೇಳಿದರು.

ಉದ್ಯಮಿ ಸುರೇಶ್ ಚಂದ್ರ ಕಮಿಲರು ಮಾತನಾಡಿ “ಸುಳ್ಯದಲ್ಲಿ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ. ವೆಂಟೆಂಡ್ ಡ್ಯಾಮ್ ಗೆ ಕೋಟಿ ಅನುದಾನ ಬಂದುದು ಬಿಟ್ಟರೆ ಬೇರೆ ಏನಾಗಿದೆ ಇಲ್ಲಿ ಎಂದು‌ ಪ್ರಶ್ನಿಸಿದ ಅವರು ರಸ್ತೆ ಅಭಿವೃದ್ಧಿ ಯಾಗದೆ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದು‌ ಹೇಳಿದರು.

ಸೀತಾನಂದ ಬೇರ್ಪಡ್ಕ ರು‌ಮಾತನಾಡಿ ರಸ್ತೆ ಅಭಿವೃದ್ಧಿಗೆ ಊರವರು ಪ್ರತಿಭಟನೆ ನಡೆಸುತ್ತಾರೆಂದು ಗೊತ್ತಾದಾಗ ನಿನ್ನೆ ದಿನ ಗುದ್ದಲಿಪೂಜೆ ಮಾಡಿದ್ರು.‌ಅದು ಅಲ್ಲ. ನಮಗೆ ಆ ರಸ್ತೆ ಪೂರ್ಣ ಅಭಿವೃದ್ಧಿ ಆಗಬೇಕು.‌ ಸಚಿವರು ಈ ರಸ್ತೆ ಅಭಿವೃದ್ಧಿ ‌ಮಾಡಿಸಬೇಕು” ಎಂದು ಒತ್ತಾಯಿಸಿದರು.

ನ್ಯಾಯವಾದಿ ದಿನೇಶ್ ಮಡಪ್ಪಾಡಿ ಮಾತನಾಡಿ ಸುಳ್ಯ ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅಭಿವೃದ್ದಿ ಅತೀ ಅಗತ್ಯ. ಸುಳ್ಯದವರು ಸುಮ್ಮ ಸುಮ್ಮನೆ ಪ್ರತಿಭಟಿಸುವವರಲ್ಲ.‌ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ನಾವು ಕೇಳಬೇಡವೆ. ಈ ರಸ್ತೆ ಅಭಿವೃದ್ಧಿ ಆಗಬೇಡವೆ. ಈ ರಸ್ತೆ ಅಭಿವೃದ್ಧಿ ಆದರೆನೇ ಪಟ್ಟಣ ಬೆಳೆಯುತ್ತದೆ.‌ ಈ ರಸ್ತೆಯಲ್ಲಿ ಸಂಚರಿಸಿದರೆ ಆರೋಗ್ಯ ವೂ ಹದಗೆಡುತ್ತದೆ. ಅಷ್ಟರ ಮಟ್ಟಿಗೆ ಹದಗೆಟ್ಟಿದೆ. ಈ ರಸ್ತೆ ಅಭಿವೃದ್ಧಿಯ ಹಠ ಆಡಳಿತದವರಿಗೆ ಯಾಕೆ ಬಂದಿಲ್ಲ.‌ ಇಂದಿನ ಈ ಸೌಮ್ಯ ಹೋರಾಟವನ್ನು ಅರ್ಥ ಮಾಡಿಕೊಂಡು ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕೃಷಿಕ ಸುರೇಶ್ ಅಮೈ ಮಾತನಾಡಿ “ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ತಿಳಿದುಕೊಂಡು ಜನರ ಬೇಡಿಕೆಗೆ ಸ್ಪಂದಿಸಬೇಕು. ನಮ್ಮ ಹಕ್ಕನ್ನು ಮೊಟಕುಗೊಳಿಸುವ ಕೆಲಸ ಆಗಬಾರದು” ಎಂದು ಹೇಳಿದರು.

ದುಗಲಡ್ಕದ ಬಾಲಕೃಷ್ಣ ನಾಯರ್ ಮಾತನಾಡಿ ನಾವು ಕೂಡಾ ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡಿದವರೇ. ಆಡಳಿತದಲ್ಲಿ ಇರುವವರು ಮೊನ್ನೆ ಪತ್ರಿಕಾಗೋಷ್ಠಿ ನಡೆಸಿ ನಮ್ಮನ್ನೇ ರಾಜಕೀಯ ಲಾಭ ಪಡೆಯಲು ಹೀಗೆ ಮಾಡುವವರು ಎಂದು ಹೇಳುತ್ತಾರೆ. ಕಾರ್ಯಕರ್ತರಿಗೆ ಇವರು ಬೆಲೆ ಕೊಡಬೇಕಲ್ಲವೇ. ರಸ್ತೆ ಅಭಿವೃದ್ಧಿ ಹೋರಾಟಕ್ಕಾಗಿ ನಮ್ಮ ಸಭೆ ನಡೆದ ಮರುದಿನವೇ ರೂ.65 ಲಕ್ಷ ಬಂದಿದೆ.‌ಅದು ಎಲ್ಲಿಂದ ಬಂದುದು ಕಿಸೆಯಿಂದ ಬಂತೇ ಎಂದ ಅವರು ನಮ್ಮ ಜನಪ್ರತಿನಿಧಿಗಳು ಸರಿ ಇಲ್ಲ. ಸಮಸ್ಯೆಯನ್ನು ಸರಿಯಾಗಿ ತಲುಪಿಸುವ ಕೆಲಸ ಅವರು ಮಾಡುತ್ತಿಲ್ಲ ಎಂದು ಹೇಳಿದರು.

ಸಭೆ ಬಳಿಕ ನ.ಪಂ. ಎದುರು‌ ಇಡಲಾಗಿದ್ದ ನಿಧಿ ಸಂಗ್ರಹಣಾ ಡಬ್ಬಿಗೆ ಸೇರಿದವರು ಹಣ ಹಾಕಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಡಾ.ಗಣೇಶ್ ಶರ್ಮ, ಡಾ. ರಘುರಾಮ ಮಾಣಿಬೆಟ್ಟು, ಸೀತಾನಂದ ಬೇರ್ಪಡ್ಕ, ಉಷಾ ನೀರಬಿದಿರೆ, ಗಿರೀಶ್ ಪಾಲಡ್ಕ, ಶಂಭಯ್ಯ ಪಾರೆ, ಡಾ. ಅಶೋಕ್ ಕಮಿಲ, ನಟರಾಜ್ ಶರ್ಮ, ಗ್ರಾ.ಪಂ.ಅ ಧ್ಯಕ್ಷೆ ಚಿತ್ರಕುಮಾರಿ, ಶಿವರಾಮ ಎಂ.ಪಿ., ಪ್ರಭಾಕರ ಅಮೈ, ನಾರಾಯಣ ರಾವ್ ಕೊಡಿಯಾಲಬೈಲು, ವಿಷ್ಣು ಭಟ್ ಕುದ್ಪಾಜೆ, ರಾಧಾಕೃಷ್ಣ ಬೇರ್ಪಡ್ಕ, ರವಿಚಂದ್ರ ಈಶ್ವರಡ್ಕ, ಲೋಹಿತ್ ಮಾಣಿಬೆಟ್ಟು, ಖಲಂದರ್ ಎಲಿಮಲೆ, ಗುರುಪ್ರಸಾದ್ ಅಮೈ, ವಾಸುದೇವ ಮದಕ, ದಿನೇಶ್ ಕೊಯಿಕುಳಿ, ಉದಯಕುಮಾರ್ ಮಾಣಿಬೆಟ್ಟು, ಅಪ್ಪಯ್ಯ ಮಣಿಯಾಣಿ, ಶಿಯಾಬು ಜಟ್ಟಿಪಳ್ಳ, ಪ್ರವೀಣ್ ರೈ ನೀರಬಿದಿರೆ ಮೊದಲಾದವರು, ನೂರಾರು ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.